- Kannada News Photo gallery Government is planning to offer on the spot insurance cover to uninsured vehicles, check out all details
Vehicle Insurance: ಇನ್ಸುರೆನ್ಸ್ ಇಲ್ಲದೆ ಸಂಚರಿಸುವ ವಾಹನಗಳಿಗೆ ಇನ್ಮುಂದೆ ಸ್ಪಾಟ್ ನಲ್ಲೇ ಇನ್ಸುರೆನ್ಸ್
ಭಾರತದಲ್ಲಿ ಪ್ರತಿ ವಾಹನಗಳಿಗೂ ಮೂರನೇ ವ್ಯಕ್ತಿಯ ವಿಮೆ ಹೊಂದಿರುವುದನ್ನ ಕಡ್ಡಾಯಗೊಳಿಸಲಾಗಿದ್ದು, ಕಡ್ಡಾಯ ನಿಯಮ ಉಲ್ಲಂಘಿಸಿ ವಿಮೆ ಇಲ್ಲದೆ ಸಂಚರಿಸುವ ವಾಹನಗಳಿಗೆ ಸ್ಥಳದಲ್ಲಿಯೇ ವಿಮೆ ವಿತರಣೆ ಮಾಡುವ ಸೌಲಭ್ಯ ಕಲ್ಪಿಸಲಾಗುತ್ತಿದೆ.
Updated on: Feb 28, 2023 | 5:29 PM

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಮೋಟಾರ್ ವೆಹಿಕಲ್ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಹೆಚ್ಚುತ್ತಿವೆ. ಅದರಲ್ಲೂ ಅಪಘಾತಗಳ ಸಂದರ್ಭದಲ್ಲಿ ಮೂರನೇ ವ್ಯಕ್ತಿಗೆ ಪರಿಹಾರ ಒದಗಿಸಲು ಅನುಕೂಲಕರವಾಗಿರುವ ಥರ್ಡ್ ಪಾರ್ಟಿ ಇನ್ಸುರೆನ್ಸ್ ಹೊಂದಿಲ್ಲದೆ ಇರುವುದು ಹಲವು ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ವಿಮೆ ಇಲ್ಲದೆ ಸಿಕ್ಕಿಬಿಳುವ ವಾಹನಗಳಿಗೆ ಸ್ಥಳದಲ್ಲೇ ವಿಮೆ ಖರೀದಿಸಲು ಸಹಕಾರಿಯಾಗುವ ಹೊಸ ಸೌಲಭ್ಯ ಪರಿಚಯಿಸಲು ಯೋಜನೆ ರೂಪಿಸಲಾಗುತ್ತಿದೆ.

ದೇಶಾದ್ಯಂತ ಬಳಕೆಯಲ್ಲಿರುವ 40-50 ಪ್ರತಿಶತದಷ್ಟು ವಾಹನಗಳು ವಿಮೆ ಹೊಂದಿಲ್ಲ ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾದ ನಂತರ ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಮಹತ್ವದ ಸಭೆ ನಡೆಸಿದೆ. ಸಭೆಯ ನಂತರ ವಿಮೆ ಇಲ್ಲದ ವಾಹನಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಹಲವು ಶಿಫಾರಸ್ಸು ಮಾಡಿದ್ದು, ವಿಮೆ ಮಾಡದ ವಾಹನಗಳಿಗೆ ಸ್ಥಳದಲ್ಲೇ ವಿಮಾ ರಕ್ಷಣೆಯನ್ನು ಒದಗಿಸುವ ಕುರಿತಂತೆ ಹಲವು ಸಲಹೆಗಳನ್ನು ನೀಡಿದೆ.

ಮುಖ್ಯವಾಗಿ ಹೆದ್ದಾರಿಗಳಲ್ಲಿ ಚಲಿಸುವ ವಿಮೆ ಮಾಡದ ವಾಹನಗಳಿಗೆ ಕಟ್ಟುನಿಟ್ಟಾಗಿ ವಿಮೆ ಹೊಂದುವಂತೆ ಮಾಡಲು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಸಾರಿಗೆ ಇಲಾಖೆಗೆ ಸಲಹೆಗಳನ್ನ ನೀಡಲಾಗಿದ್ದು, ಈ ಹಿನ್ನಲೆ ಹೊಸ ಶಿಫಾರಸ್ಸುಗಳನ್ನ ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಜಾರಿಗೆ ಮಾಡಬಹುದಾಗಿದೆ.

ಹೆದ್ದಾರಿಗಳಲ್ಲಿ ಸಂಚರಿಸುವಾಗ ವಿಮೆ ಇಲ್ಲದ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಹೊಸ ಮಾದರಿಯ ಸಾಧನಗಳ ಬಳಕೆಗೆ ಶಿಫಾರಸ್ಸು ಮಾಡಲಾಗಿದ್ದು, ಇದರೊಂದಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಫಾಸ್ಟ್ ಟ್ಯಾಗ್ ಬ್ಯಾಲೆನ್ಸ್‌ನಿಂದ ವಿಮೆ ಹಣವನ್ನು ಕಡಿತ ಮಾಡುವ ಮೂಲಕ ತ್ವರಿತವಾಗಿ ವಿಮೆ ಮಾಡುತ್ತಾರೆ.

ಇದಕ್ಕಾಗಿ ವಿಮಾ ಕಂಪನಿಗಳನ್ನು ಬ್ಯಾಂಕ್‌ಗಳ ಜೊತೆಗೆ ಫಾಸ್ಟ್ ಟ್ಯಾಗ್ ಪ್ಲಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲು ಅನುವು ನೀಡಬಹುದಾಗಿದ್ದು, ಈ ಕುರಿತಂತೆ ಮಾರ್ಚ್ 17ರಂದು ನಡೆಯಲಿರುವ ಅಂತಿಮ ಹಂತದ ಸಭೆಯಲ್ಲಿ ಹೊಸ ನಿಯಮಗಳ ಜಾರಿ ಕುರಿತಂತೆ ಅಂತಿಮ ನಿರ್ಧಾರಗಳನ್ನು ತಗೆದುಕೊಳ್ಳಲಿದೆ.

ಭಾರತದಲ್ಲಿ ಸದ್ಯ ಅಪಘಾತ ಸಂತ್ರಸ್ತರಿಗೆ ವೈದ್ಯಕೀಯ ಮತ್ತು ಚಿಕಿತ್ಸಾ ವೆಚ್ಚವನ್ನು ಭರಿಸಲು ಥರ್ಡ್ ಪಾರ್ಟಿ ಇನ್ಸುರೆನ್ಸ್ ಸಾಕಷ್ಟು ಸಹಕಾರಿಯಾಗಿದ್ದು, ಮೂರನೇ ವ್ಯಕ್ತಿಯ ವಿಮೆಯ ಪ್ರೀಮಿಯಂ ವಾಹನಗಳ ಗಾತ್ರವನ್ನ ಅವಲಂಬಿಸಿರುತ್ತದೆ. 1,000 ಸಿಸಿ ಪ್ರಯಾಣಿಕ ವಾಹನಗಳಿಗೆ ರೂ 2,072 ರಿಂದ 1,000-1,500 ಸಿಸಿ ವಾಹನಗಳಿಗೆ ರೂ 3,221 ಮತ್ತು 1,500ಸಿಸಿ ಗಿಂತಲೂ ಹೆಚ್ಚಿನ ಗಾತ್ರದ ಎಂಜಿನ್ ಹೊಂದಿರುವ ವಾಹನಗಳು ರೂ 7,890 ವರೆಗೆ ಇನ್ಸುರೆನ್ಸ್ ಪಾವತಿಸಬೇಕಾಗುತ್ತದೆ.




