
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯನಿಗೆ ಎರಡು ದಿನಗಳ ಅಡಿಕೃತ್ತಿಗೆ ಹರೋಹರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ತಮಿಳು ಸಮಾಜದವರು ಆಚರಿಸುವ ಈ ಜಾತ್ರೆಯಲ್ಲಿ ಹತ್ತು ಹಲವು ವಿಶೇಷತೆಗಳಿಂದ ಕೂಡಿತ್ತು. ಬಾಲಸುಬ್ರಹ್ಮಣ್ಯನಿಗೆ ವಿಶಿಷ್ಟವಾಗಿ ಭಕ್ತರು ಹರಿಕೆ ತೀರಿಸಿದ್ದಾರೆ.

ಶಿವಮೊಗ್ಗದಿಂದ ಹೊಳೆಹೊನ್ನೂರು ರಸ್ತೆಗೆ ಹೊರಟರೆ ಬಲಭಾಗದಲ್ಲಿ ಗುಡ್ಡ ಮೇಲೆ ಬೃಹತ್ ಒಂದು ದೇವಸ್ಥಾನ ಕಾಣಿಸುತ್ತದೆ. ಆ ದೇವಸ್ಥಾನದ ಹೆಸರು ಗುಡ್ಡೆಕಲ್ ಬಾಲಸುಬ್ರಹ್ಮಣ್ಯ. ಶಿವಮೊಗ್ಗದಲ್ಲಿ ಹೆಚ್ಚು ತಮಿಳು ಸಮಾಜದವರಿದ್ದಾರೆ. ಅವರನ್ನು ಸೇರಿದಂತೆ ಇತರೆ ಜನರು ಭಕ್ತಿ ಭಾವದಿಂದ ಬಾಲಸುಬ್ರಹ್ಮಣ್ಯನನ್ನು ಪೂಜಿಸುತ್ತಾರೆ.

ಸರದಿಯಲ್ಲಿ ನಿಂತು ಸಾವಿರಾರು ಭಕ್ತರು ಬಾಲ ಸುಬ್ರಮಣ್ಯನ ದರ್ಶನ ಪಡೆದಿದ್ದಾರೆ. ಬಾಲ ಸುಬ್ರಮಣ್ಯನ ಪರ ಹಾಕಿರುವ ಘೋಷಣೆ ಮುಗಿಲು ಮುಟ್ಟಿತ್ತು.

ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ಬಾಲಸುಬ್ರಮಣ್ಯನಿಗೆ ಅಡಿಕೃತ್ತಿಕೆ ಹರೋಹರ ಜಾತ್ರೆ ನಡೆಯಿತು. ಈ ಜಾತ್ರೆಯು ಸಂಭ್ರಮ ಸಡಗರದಿಂದ ಕೂಡಿತ್ತು. ಕೊವಿಡ್ ಬಳಿಕ ಬೇರೆ ಬೇರೆ ಭಾಗಗಳಿಂದ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ತಮ್ಮ ತಮ್ಮ ಇಷ್ಟಾರ್ಥ ನೆರವೇರಿದ ಹಿನ್ನಲೆಯಲ್ಲಿ ಭಕ್ತರು ಕಾವಡಿಯನ್ನು ಹೊತ್ತು ತರುವ ಮೂಲಕ ಹರಕೆಯನ್ನು ತೀರಿಸುವುದು ಒಂದು ವೈಶಿಷ್ಟ್ಯವಾಗಿದೆ. ಈ ಹರೋಹರ ಜಾತ್ರೆಯು ಆಷಾಡ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಎರಡು ದಿನ ಉತ್ಸವವನ್ನು ಆಚರಿಸುತ್ತಾರೆ.

ಬಾಯಿ, ಬೆನ್ನು, ಕೈ ಯಲ್ಲಿ ಕಬ್ಬಿಣದ (ರಾಡ್) ತುಂಡಗಳನ್ನು (ಆಯುಧ) ಚುಚ್ಚಿಕೊಂಡು, ಬೆಟ್ಟದ ಮೇಲಿರುವ ಬಾಲಸುಬ್ರಹ್ಮಣ್ಯನ ದರ್ಶನ ಪಡೆಯುವ ಮೂಲಕ ಹರಿಕೆಯನ್ನು ತೀರಿಸುವುದು ಇಲ್ಲಿಯ ಸಂಪ್ರದಾಯವಾಗಿದೆ.

ಇಷ್ಟೊಂದು ಕಠಿಣ ವ್ರತ ಮತ್ತು ಹರಿಕೆಯನ್ನು ಭಕ್ತರು ತೀರಿಸುವುದನ್ನು ನೋಡಿದರೆ ಎಲ್ಲರಿಗೂ ಮೈ ಜುಂ ಎನ್ನಿಸುತ್ತದೆ. ಯಾವುದೇ ತೊಂದರೆಯಿಲ್ಲದೆ ಇಂತಹ ಅಪಾಯದ ಹರಿಕೆಯನ್ನು ಭಕ್ತರು ತುಂಬಾ ಸಲೀಸಾಗಿ ಮಾಡುವುದು ಈ ಕ್ಷೇತ್ರದ ಪವಾಡ ಎನ್ನಲಾಗುತ್ತದೆ.
Published On - 8:57 pm, Mon, 29 July 24