ರಾತ್ರಿ ಸುರಿದ ಭಾರಿ ಮಳೆಯಿಂದ ಟ್ಯಾಕ್ಸಿ ಮತ್ತು ಕಾರುಗಳಿಗೆ ಹಾನಿಯಾಗಿದೆ. ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿದ್ದ ಕಾರು ಇಂಜಿನ್ಗಳಿಗೆ ನೀರು ನುಗ್ಗಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿವೆ.
ರಾತ್ರಿ ಸುರಿದ ಮಳೆಗೆ ಏರ್ಪೋರ್ಟ್ ಸುತ್ತಾಮುತ್ತ ಅವಾಂತರ ಸೃಷ್ಟಿಯಾಗಿತ್ತು. ಸದ್ಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹಜ ಸ್ಥಿತಿಗೆ ಮರಳಿದೆ.
ಭಾರಿ ಮಳೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿವೆ. ಹಲವು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಅಂಬೇಡ್ಕರ್ನಗರ, ರಹೀಂನಗರದಲ್ಲಿರುವ ಮನೆಗಳಿಗೆ ನೀರು ನುಗ್ಗಿ, ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳಿಗೆ ಹಾನಿಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಯಲವಟ್ಟಿ ತಾಂಡಾದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ರಾತ್ರಿ ಪೂರ್ತಿ ಸುರಿದ ಮಳೆಯಿಂದ ತುಮಕೂರು ಜಿಲ್ಲೆಯ ಕೆರೆ ಕುಂಟೆಗಳು ಬಹುತೇಕ ಭರ್ತಿಯಾಗಿವೆ.ಜಿಲ್ಲೆಯ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿ ನಗರದಲ್ಲಿ ವಾಹನ ಸವಾರರು ಪರದಾಡಿದ್ದಾರೆ.
ಧಾರಾಕಾರ ಮಳೆಗೆ ಮಣ್ಣು ಕುಸಿದು ಕ್ಯಾಂಟರ್ ಪಲ್ಟಿಯಾಗಿದೆ. ಈ ಘಟನೆ ದೇವನಹಳ್ಳಿ ಹೊರವಲಯ ಸೂಲಿಬೆಲೆ ರಸ್ತೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಕ್ಯಾಂಟರ್ನಲ್ಲಿದ್ದ ಚಾಲಕ, ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.