Updated on: Jan 22, 2023 | 12:41 PM
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೋಡ್ಲಾರಹಟ್ಟಿ ಗ್ರಾಮದ ಬಳಿ ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಬುಡಕಟ್ಟು ಜನಾಂಗವು ಶೂನ್ಯದ ಮಾರಮ್ಮ ದೇವಿಯ ಉತ್ಸವ ಆಚರಿಸುವ ಮೂಲಕ ನಾಡಿನ ಒಳಿತಿಗೆ ಪ್ರಾರ್ಥಿಸುತ್ತಾರೆ.
ದೇವಿಗೆ ನಿರ್ಮಿಸಿದ್ದ ಗುಡಿಯನ್ನು ಹೊತ್ತು ಸೀಮೆ ದಾಟಿಸಿದರು. ಆ ಮೂಲಕ ನಾಡು ಸಮೃದ್ಧಿಯಿಂದರಲಿ, ದೇವರ ಎತ್ತುಗಳಿಗೂ ಮೇವು, ನೀರು ಕೊರತೆ ಆಗದಿರಲಿ, ಕೃಷಿ ಕಾಯಕ ಸಮೃದ್ಧಿ ಕಾಣಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ದೇವರ ಎತ್ತುಗಳ ಮೆರವಣಿಗೆ ನಡೆಸಿ ಹೂವು, ಬಾಳೆಹಣ್ಣು, ಮಂಡಕ್ಕಿಯನ್ನು ದೇವರೆತ್ತುಗಳ ಮೇಲೆ ಹಾಕಿ ಹರಕೆ ತೀರಿಸಿದರು.
ಮ್ಯಾಸ ಬೇಡ ಸಮುದಾಯದ ಜನರು ಶೂನ್ಯದ ಮಾರಮ್ಮ ಉತ್ಸವ ಆಚರಿಸಿದರು. ಊರ ಬಳಿಯ ಬಯಲಲ್ಲಿ ಶೂನ್ಯದ ಮಾರಮ್ಮ ದೇವಿಯ ಗುಬ್ಬದ ಗುಡಿ ನಿರ್ಮಿಸಿ ಎರಡು ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಿದರು.
ಇನ್ನು ಎರಡು ದಿನಗಳ ಕಾಲ ನಡೆಯುವ ಈ ಉತ್ಸವದ ವೇಳೆ ಶೂನ್ಯದ ಮಾರಮ್ಮ ದೇವಿ ಗುಡಿ ಜೊತೆಗೆ ಮುತ್ತಯ್ಯಗಳ ದೇವರು, ಗಾದ್ರಿ ದೇವರು, ಬಂಗಾರ ದೇವರು, ಓಬಳ ದೇವರು ಮತ್ತು ಬೊಮ್ಮ ದೇವರುಗಳಿಗೆ ಗಿಡಮರಗಳ ತಪ್ಪಲಿನಿಂದ (ಪದಿ) ಗುಡಿ ನಿರ್ಮಿಸಿ ಪೂಜಿಸಲಾಗುತ್ತದೆ.
ಬಾಳೆಹಣ್ಣು ಬೆಲ್ಲವನ್ನು ನೆಲಕ್ಕೆ ಹಾಕಿದಾಗ ಪೂಜಾರಿಗಳು ಕೈಯಿಂದ ಮುಟ್ಟದೆ ಬಾಯಿಂದ ಸ್ವೀಕರಿಸುವ ಮಣೇವು ಆಚರಣೆ ನಡೆಯುತ್ತದೆ. ಬಳಿಕ ದೇವರನ್ನು ಸಾಗ ಹಾಕಿ ಭಕ್ತರು ಪ್ರಸಾದ ಸ್ವೀಕರಿಸುವ ಮೂಲಕ ಶೂನ್ಯದ ಮಾರಮ್ಮ ಸಮಾಪ್ತಿಗೊಳ್ಳುತ್ತದೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ತೊಡ್ಲಾರಹಟ್ಟಿ ಬಳಿ ಸುಗ್ಗಿ ಹಬ್ಬದ ಬಳಿಕ ಮ್ಯಾಸಬೇಡ ಸಮುದಾಯದ ಜನರು ಶೂನ್ಯದ ಮಾರಮ್ಮ ದೇವಿಯ ಉತ್ಸವ ಆಚರಿಸುತ್ತಾರೆ. ಈ ವಿಶೇಷ ಆಚರಣೆಯಿಂದಾಗಿ ಪಶು ಪಾಲನೆ ಮತ್ತು ಕೃಷಿ ಕಾಯಕ ಸಮೃದ್ಧಿ ಕಾಣುತ್ತದೆ ಎಂಬುದು ಬುಡಕಟ್ಟು ಸಮುದಾಯದ ಜನರ ನಂಬಿಕೆ ಆಗಿದೆ.