ಬಸವನಗುಡಿಯ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದ್ದು, ದೊಡ್ಡ ಗಣೇಶ ದೇವಸ್ಥಾನದ ಸುತ್ತ - ಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ. ಈ ವರ್ಷ 5 ದಿನ ಪರಿಷೆ ನಡೆಯಲಿದೆ. ಬಸವನಗುಡಿಯ ಸುತ್ತ - ಮುತ್ತಾ ವ್ಯಾಪರಸ್ಥರು ಅಂಗಡಿಗಳನ್ನ ಹಾಕಿದ್ದು, ಬುಲ್ ಟೆಂಪಲ್ ರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಈ ವರ್ಷದ ಪರಿಷೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಲಿದ್ದು, ದೊಡ್ಡ ಬಸವಣ್ಣನಿಗೆ ಹಾಗೂ ದೊಡ್ಡ ಗಣೇಶನಿಗೆ ಕಡಲೆಯಿಂದ ಅಭಿಷೇಕ ಮಾಡುವ ಮೂಲಕ ಮುಜುರಾಯಿ ಸಚಿವರಿಂದ ಉದ್ಘಾಟನೆ ಮಾಡುವುದು ಪ್ರತೀತಿ. ಆದ್ರೆ ಈ ವರ್ಷ ಪರಿಷೆಗೆ ಎರಡು ದಿನದ ಮೊದಲೇ ಜಾತ್ರೆಯ ವಾತಾವರಣ ಮನೆಮಾಡಿದೆ.
ಈ ವರ್ಷದ ಕಡಲೆಕಾಯಿ ಪರಿಷೆಗೆ ವಿವಿಧ ಜಿಲ್ಲೆಗಳಿಂದ 200 ಜನ ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, 15 ಕ್ಕು ಹೆಚ್ಚು ಬಗೆಯ ಕಡಲೆಕಾಯಿಗಳ ಸ್ಟಾಲ್ ಗಳನ್ನ ಹಾಕಲಾಗಿದೆ.
ಕಡಲೆಕಾಯಿ ಪರಿಷೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಕೂಡ ಆಯೋಜನೆ ಮಾಡಿದ್ದು, ನೂರಾರು ಸಂಖ್ಯೆಯಲ್ಲಿ ವ್ಯಾಪರಸ್ಥರು ಪರಿಷೆಗೆ ಬರಲಿದ್ದಾರೆ. ಇನ್ನು, ಭಾರಿ ಪರಿಷೆಯಲ್ಲಿ ಆಂಧ್ರ, ತಮಿಳುನಾಡು, ಬೆಳಗಾವಿ, ಚಿಕ್ಕಬಳ್ಳಾಪುರ ನಾಟಿ, ಸೇಲ್ವಾಂ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳು ಪರಿಷೆಯಲ್ಲಿ ಸಿಗಲಿದೆ.
ಈ ಪರಿಷೆಗೆ 4 ರಿಂದ 5 ಲಕ್ಷ ಜನರು ಬರುವ ಸಾಧ್ಯತೆಗಳಿದ್ದು, ದೇವಸ್ಥಾನದ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನ ಹಾಕಲಾಗಿದೆ. ಇನ್ನು ಮಾರ್ಷಲ್ಸ್ ಹಾಗೂ ಪೋಲೀಸರ ನಿಯೋಜನೆ ಮಾಡಲಾಗಿದೆ. ಅಲ್ಲದೇ ಭಾನುವಾರದಿಂದ ದೊಡ್ಡ ಗಣೇಶ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕ್ಲೋಸ್ ಆಗುವ ಸಾಧ್ಯತೆಗಳಿದೆ.
ಈ ಬಾರಿ ಕಡಲೆಕಾಯಿಗಳ ಬೆಲೆ ಕೊಂಚ ಏರಿಕೆಯಾಗಿದೆ. ಈ ಬಾರಿ ಮಳೆ ಕೈ ಕೊಟ್ಟ ಪರಿಣಾಮ ಒಂದು ಸೇರು ಕಡಲೆಕಾಯಿಗೆ 60 ರಿಂದ 100 ರೂವರೆಗೂ ಇದ್ದು, ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು ಇದ್ದಾರೆ.