
ಭಾರತದ ಇಂದಿನ ಶಕ್ತಿ ಕೇವಲ ಶಸ್ತ್ರಾಸ್ತ್ರಗಳಲ್ಲಿ ಮಾತ್ರವಲ್ಲ, ಏಕತೆಯಲ್ಲೂ ಇದೆ. ನಮ್ಮ ಶಕ್ತಿ ಕೇವಲ ಆಯುಧಗಳಲ್ಲಿ ಇಲ್ಲ. ಭಾರತ ಹೊಸ ಡಿಆರ್‌ಡಿಒ ಕ್ಷಿಪಣಿಯನ್ನು ಪರೀಕ್ಷಿಸಿದೆ. ರಕ್ಷಣಾ ವಲಯಕ್ಕೆ ಹೆಚ್ಚಿನ ಖರ್ಚು ಮಾಡುವ ಮೂಲಕ ನಾವು ನಮ್ಮ ರಕ್ಷಣಾ ವಲಯವನ್ನು ಬಲಪಡಿಸುತ್ತಿದ್ದೇವೆ. ನಾವು ನಾಗಯಲಂಕಾದಲ್ಲಿ ಡಿಆರ್‌ಡಿಒದ ಕ್ಷಿಪಣಿ ಪರೀಕ್ಷಾ ಶ್ರೇಣಿಗೆ ಅಡಿಪಾಯ ಹಾಕಿದ್ದೇವೆ. ನಾಗಯಲಂಕಾದಲ್ಲಿ ನಿರ್ಮಿಸಲಾಗುತ್ತಿರುವ ನವದುರ್ಗಾ ಪರೀಕ್ಷಾ ಶ್ರೇಣಿಯು ದುರ್ಗಾ ದೇವಿಯಂತೆಯೇ ರಾಷ್ಟ್ರದ ರಕ್ಷಣಾ ಶಕ್ತಿಯನ್ನು ಸಬಲಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಹಲ್ಗಾಮ್ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆಹಾರ ವಸ್ತು ಸಂಗ್ರಹಿಟ್ಟುಕೊಳ್ಳುವಂತೆ ಪಾಕಿಸ್ತಾನ ಗಡಿ ಭಾಗದ ಜನತೆಗೆ ಸೂಚನೆ ನೀಡಲಾಗಿದೆ. ನೀಲಂ ಕಣಿವೆಗೆ ತೆರಳದಂತೆ ಪ್ರವಾಸಿಗರಿಗೆ ನಿರ್ದೇಶನ ನೀಡಲಾಗಿದೆ. ಕರಾಚಿ, ಲಾಹೋರ್ ವಾಯುನೆಲೆಗಳು ದಿನದ 8 ತಾಸು ಬಂದ್ ಆಗಲಿದೆ. ಪಿಒಕೆ ಪ್ರಧಾನಿ ಚೌಧರಿ ಅನ್ವರ್ ಉಲ್ ಹಕ್ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಇರುವ 13 ಕ್ಷೇತ್ರಗಳಲ್ಲಿ ಎರಡು ತಿಂಗಳ ಕಾಲ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಪಿಒಕೆ ನಾಗರಿಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ

ಪಾಕಿಸ್ತಾನ ಮತ್ತು ಭಾರತದ ನಡುವೆ ಪಹಲ್ಗಾಮ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಪ್ರಧಾನಿ ಈ ದಾಳಿಯ ಬಗ್ಗೆ ಪಾರದರ್ಶನಕ ತನಿಖೆಗೆ ಸಿದ್ಧ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಉಗ್ರರ ಜೊತೆಗೆ ಹಲವು ಕಾಲದಿಂದಲೂ ಪಾಕಿಸ್ತಾನಕ್ಕೆ ಸಂಬಂಧವಿದೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ ಎಂದಿದ್ದಾರೆ. ನಮಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಇದ್ದ ನಂಟು ರಹಸ್ಯವೇನಲ್ಲ. ಪಾಕಿಸ್ತಾನ ಉಗ್ರರಿಂದ ಬಳಲಿದೆ. ನಾವು ಕೂಡ ಭಯೋತ್ಪಾದನೆಯನ್ನು ಎದುರಿಸಿದ್ದೇವೆ. ಈ ಹಿಂದೆ ನಮಗೂ ಉಗ್ರರಿಗೂ ಸಂಬಂಧವಿದ್ದಿದ್ದು ನಿಜ. ಆದರೆ, ಈಗ ನಾವು ಉಗ್ರರ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಭುಟ್ಟೋ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತವು ಸೂಕ್ತ ಉತ್ತರ ನೀಡಬೇಕೆಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕರೆ ನೀಡಿದ್ದಾರೆ. ಹಾಗೇ, ಈ ದಾಳಿಗೆ ಕಾರಣರಾದ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಬಂಧಿಸುವಲ್ಲಿ ಭಾರತದೊಂದಿಗೆ ಸಹಕರಿಸುವಂತೆ ಜೆ.ಡಿ. ವ್ಯಾನ್ಸ್ ಪಾಕಿಸ್ತಾನವನ್ನು ಒತ್ತಾಯಿಸಿದರು. 26 ಜನರ ಸಾವಿಗೆ ಕಾರಣವಾದ ಈ ದಾಳಿಯು ಜೆ.ಡಿ. ವ್ಯಾನ್ಸ್ ಮತ್ತು ಅವರ ಕುಟುಂಬವು 4 ದಿನಗಳ ಭಾರತ ಭೇಟಿಯಲ್ಲಿದ್ದಾಗಲೇ ಸಂಭವಿಸಿತ್ತು.

26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಇಂಡೋನೇಷ್ಯಾ ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಂಡೋನೇಷ್ಯಾದಲ್ಲಿ ಆಚರಿಸಲಾಗುವ "ಇಸ್ಲಾಂನ ಬೋಧನೆಗಳನ್ನು" ಪ್ರತಿಬಿಂಬಿಸುವುದಿಲ್ಲ ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಹೇಳಿದ್ದಾರೆ. ಇಂಡೋನೇಷ್ಯಾ ಈ ಘೋರ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ಭಾರತದ ಜನರು ಮತ್ತು ಸರ್ಕಾರಿಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸತತ 8ನೇ ದಿನವೂ ಪಾಕಿಸ್ತಾನ ಕದನ ವಿರಾಮ ನಿಯಮ ಉಲ್ಲಂಘಿಸಿದೆ. ಜಮ್ಮು ಮತ್ತು ಕಾಶ್ಮೀರದ ಮೂರು ಗಡಿ ಜಿಲ್ಲೆಗಳಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸತತ 8ನೇ ದಿನದ ರಾತ್ರಿಯೂ ಕದನ ವಿರಾಮ ಉಲ್ಲಂಘನೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ನೌಶೇರಾ ಮತ್ತು ಅಖ್ನೂರ್ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ಭೀತಿ ಶುರುವಾಗಿದೆ.

ಉಗ್ರರನ್ನು ಪರೋಕ್ಷವಾಗಿ ಸಲಹುತ್ತಿರುವ ಪಾಕಿಸ್ತಾನಕ್ಕೆ ಪೆಟ್ಟು ಕೊಡಲು ಭಾರತ ಮುಂದಾಗಿದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಗ್ರೇ ಪಟ್ಟಿಗೆ ಸೇರಿಸಲು ಭಾರತ ಪ್ರಯತ್ನ ಮಾಡುತ್ತಿದೆ. 2024ರಲ್ಲಿ ಪಾಕಿಸ್ತಾನಕ್ಕೆ IMF 7 ಬಿಲಿಯನ್ ಡಾಲರ್ ಸಹಾಯ ನೀಡಿತ್ತು. ಈ ಹಣವನ್ನು ಪಾಕ್ ಭಯೋತ್ಪಾದಕ ಚಟುವಟಿಕೆಗಳಿಗೆ ದುರುಪಯೋಗ ಮಾಡಿಕೊಂಡಿದೆ ಎಂದು ಭಾರತ ವಾದಿಸಿದೆ. ಪಾಕಿಸ್ತಾನವು 2018ರಿಂದ 2022ರವರೆಗೆ FATF ಗ್ರೇ ಲಿಸ್ಟ್‌ನಲ್ಲಿತ್ತು. ನಂತರ 2022ರಲ್ಲಿ ಪಾಕಿಸ್ತಾನವನ್ನು ಗ್ರೇ ಲಿಸ್ಟ್ನಿಂದ ತೆಗೆಯಲಾಗಿತ್ತು. ಪಾಕಿಸ್ತಾನ ಉಗ್ರ ಚಟುವಟಿಕೆಗೆ ಸಹಾಯ ಮಾಡಲ್ಲ ಎಂದು ಭರವಸೆ ನೀಡಿತ್ತು. ಈಗ ಮತ್ತೆ ಗ್ರೇ ಲಿಸ್ಟ್‌ಗೆ ಸೇರಿದರೆ ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ಬೀಳುತ್ತದೆ. ಪಾಕಿಸ್ತಾನಕ್ಕೆ ಹಣಕಾಸು ನೆರವು ದೊರೆತರೆ ಅದರ ಕುಕೃತ್ಯಗಳಿಗೆ ಇನ್ನಷ್ಟು ಪ್ರಚೋದನೆ ಸಿಕ್ಕಂತಾಗುತ್ತದೆ. ಹೀಗಾಗಿ, ಆ ದೇಶಕ್ಕೆ ಸಾಲ ನೀಡುವ ನಿರ್ಧಾರವನ್ನು ಹಿಂಪಡೆಯಲು ಯೋಚಿಸಿ ಎಂದು ಐಎಂಎಫ್ಗೆ ಭಾರತ ಕರೆ ನೀಡಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತದ ಜೊತೆ ನಿಲ್ಲುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ. ನಾವು ಪ್ರಧಾನಿ ಮೋದಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದೆ. ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಿ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮನವಿ ಮಾಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತದ ಜೊತೆ ನಿಲ್ಲುತ್ತದೆ ಮತ್ತು ಪ್ರಧಾನಿ ಮೋದಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ‘ನಮ್ಮ ಸರ್ಕಾರ ಭಾರತ ಮತ್ತು ಪಾಕಿಸ್ತಾನದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟ್ಯಾಮಿ ಬ್ರೂಸ್ ಹೇಳಿದ್ದಾರೆ.