
ಭಾರತೀಯ ಯುವಸಮುದಾಯದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯೊಂದರ ಪ್ರಕಾರ 18ರಿಂದ 69 ವರ್ಷ ವಯೋಮಾನದ ಪುರುಷರಲ್ಲಿ ಬೊಜ್ಜಿನ ಸಮಸ್ಯೆ ಇರುವವರ ಪ್ರಮಾಣ ಶೇ. 22.9 ಅಂತೆ. ಇದು ಐದನೇ ಸಮೀಕ್ಷೆಯಾಗಿದೆ. ಹಿಂದಿನ ಸಮೀಕ್ಷೆ, ಅಂದರೆ ನಾಲ್ಕನೇ ಸಮೀಕ್ಷೆಯಲ್ಲಿ ಆ ವಯೋಮಾನದವರಲ್ಲಿ ಬೊಜ್ಜು ಹೊಂದಿರುವವರ ಪ್ರಮಾಣ ಶೇ. 18.9 ರಷ್ಟು ಇತ್ತು. ನಾಲ್ಕು ಪ್ರತಿಶತದಷ್ಟು ಹೆಚ್ಚಳವಾಗಿದೆ. ಹಾಗೆಯೇ, ಅದೇ ವಯೋಮಾನದ ಮಹಿಳೆಯರಲ್ಲಿ ಬೊಜ್ಜು ಹೊಂದಿರುವವರ ಸಂಖ್ಯೆ ಶೇ. 20.6ರಿಂದ ಶೇ. 24ಕ್ಕೆ ಏರಿಕೆ ಆಗಿದೆ.

ತಪ್ಪಾದ ಆಹಾರ ಕ್ರಮ, ಅತಿಯಾದ ಸೋಷಿಯಲ್ ಮೀಡಿಯಾ ಬಳಕೆ, ಅತಿಯಾದ ಟಿವಿ ವೀಕ್ಷಣೆ, ಸೋಂಬೇರಿತನದ ಜೀವನಶೈಲಿ ಇವೆಲ್ಲವೂ ಡಯಾಬಿಟಿಸ್, ಬಿಪಿ, ಹೃದ್ರೋಗ, ಕ್ಯಾನ್ಸರ್ ಇತ್ಯಾದಿಗೆ ಎಡೆ ಮಾಡಿಕೊಡುತ್ತಿವೆ. ಭಾರತದಲ್ಲಿ ಸಣ್ಣ ವಯಸ್ಸಿನ ಮಂದಿಯಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚೆಚ್ಚು ಕಾಡತೊಡಗಿದೆ.

ಅನಾರೋಗ್ಯಯುತ ಆಹಾರಗಳ ಸೇವನೆಯಿಂದ ಶೇ. 54ರಷ್ಟು ಜನರು ಕಾಯಿಲೆ ತಂದುಕೊಳ್ಳುತ್ತಿದ್ದಾರೆ. ನಗರ ಭಾಗದಲ್ಲಿ ಶೇ. 70ರಷ್ಟು ಜನರು ಬೊಜ್ಜಿನ ಸಮಸ್ಯೆ ಹೊಂದಿದ್ದಾರೆ. 19 ವರ್ಷದೊಳಗಿನ ಮಕ್ಕಳಲ್ಲಿ ಸಹಜಕ್ಕಿಂತ ಹೆಚ್ಚು ತೂಕ ಹೊಂದಿರುವವರ ಸಂಖ್ಯೆ 1.25 ಕೋಟಿ ಇದೆ.

ಈ ಮೇಲಿನ ಅಂಕಿ ಅಂಶಗಳಿಗೂ ಭಾರತದ ಆರ್ಥಿಕತೆಗೂ ಸಂಬಂಧ ಇದೆ. 2023-24ರ ಆರ್ಥಿಕ ಸಮೀಕ್ಷೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಭಾರತದ ಆರ್ಥಿಕತೆಯ ಅಭಿವೃದ್ಧಿ ಪೂರ್ಣ ಶಕ್ತಿಯಲ್ಲಿ ಆಗಬೇಕೆಂದರೆ ಕೆಲಸ ಮಾಡಬಲ್ಲ ಮಾನವ ಸಂಪನ್ಮೂಲ ಪೂರ್ಣ ಬಳಕೆ ಆಗಬೇಕು. ಆದರೆ, ಯುವ ಸಮುದಾಯ ಬಹಳಷ್ಟು ಕಾಯಿಲೆಗಳಿಂದ ಬಳಲುತ್ತಿದ್ದು ಇದು ಮಾನವ ಸಂಪನ್ಮೂಲದ ಸರಿಯಾದ ಬಳಕೆ ಅಸಾಧ್ಯವಾಗುವಂತೆ ಮಾಡುವ ಭೀತಿ ಇದೆ.

ಬೊಜ್ಜು ಹಲವು ರೋಗಗಳಿಗೆ ಮೂಲವಾಗಿದೆ. ಜನರು ತಮ್ಮ ದೇಹದ ಬೊಜ್ಜನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿದರೆ ಅವರ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. ಹಾಗೆಯೇ, ದೇಶದ ಆರೋಗ್ಯವೂ ಉತ್ತಮವಾಗಿರುತ್ತದೆ. ಜನರು ತಮ್ಮ ಬಾಡಿ ಮಾಸ್ ಇಂಡೆಕ್ಸ್ ಅಥವಾ ಬಿಎಂಐ ಅನ್ನು 25ಕ್ಕಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಬಿಎಂಐ 30ಕ್ಕಿಂತ ಹೆಚ್ಚಿದ್ದರೆ ಅದು ಒಬೆಸಿಟಿ ಅಥವಾ ಬೊಜ್ಜು ಸ್ಥಿತಿ ಎನಿಸುತ್ತದೆ.