
ದೆಹಲಿಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಲು ರೈಲನ್ನೇ ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಭಾರತದಲ್ಲಿ ತಮ್ಮ ದಿನನಿತ್ಯದ ಓಡಾಟಕ್ಕಾಗಿ ಈ ರೈಲ್ಲನ್ನೇ ಅವಲಂಬಿಸಿಕೊಂಡವರೇ ಸಂಖ್ಯೆ ಹೆಚ್ಚು ಎನ್ನಬಹುದು. ಹೀಗಾಗಿ ಈ ಭಾರತೀಯ ರೈಲ್ವೆ ವಿಶ್ವದಲ್ಲೇ ಅತೀ ದೊಡ್ಡ ರೈಲು ಜಾಲವಾಗಿದ್ದು, ಎಂಟು ಸಾವಿರಕ್ಕೂ ಅಧಿಕ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ ಎಂದರೆ ಅಚ್ಚರಿಯೆನಿಸಬಹುದು.

ಭಾರತದಲ್ಲಿ ಕೆಲವು ರೈಲ್ವೆ ನಿಲ್ದಾಣಗಳು ತನ್ನ ವಿಶೇಷತೆಗಳಿಂದಲೇ ಹೆಸರು ವಾಸಿಯಾಗಿದೆ. ಅದಲ್ಲದೇ ರೈಲ್ವೆ ನಿಲ್ದಾಣದ ಹೆಸರುಗಳು ಹಲವಾರು ಕಥೆಗಳನ್ನು ಹೊಂದಿದೆ. ಇನ್ನು ವಿಶೇಷ ಎನ್ನುವಂತೆ ಭಾರತದ ಕೊನೆಯ ರೈಲ್ವೆ ನಿಲ್ದಾಣವೊಂದಿದೆ. ಆ ನಿಲ್ದಾಣವು ತನ್ನ ವಿಶೇಷತೆಗಳಿಂದ ಜನಪ್ರಿಯವಾಗಿದೆ.

ಭಾರತದ ಕೊನೆಯ ರೈಲ್ವೆ ನಿಲ್ದಾಣದ ಹೆಸರು ಸಿಂಗಾಬಾದ್ ರೈಲ್ವೆ ನಿಲ್ದಾಣ. ಅಂದಹಾಗೆ, ಈ ನಿಲ್ದಾಣದ ಮತ್ತೊಂದು ವಿಶೇಷತೆಯೆಂದರೆ ಮಹಾತ್ಮಗಾಂಧಿ ಹಾಗೂ ಸುಭಾಸ್ ಚಂದ್ರ ಬೋಸ್ ಈ ಇಬ್ಬರೂ ಕೂಡ ಈ ರೈಲ್ವೆ ನಿಲ್ದಾಣದ ಮೂಲಕವೇ ಪ್ರಯಾಣಿಸುತ್ತಿದ್ದರಂತೆ. ಈ ಸಿಂಗಾಬಾದ್ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಲ್ಲಿದೆ.

ಹೌದು, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಬೀಬ್‌ಪುರ ಪ್ರದೇಶದಲ್ಲಿರುವ ಈ ನಿಲ್ದಾಣವು ಭಾರತದ ಕೊನೆಯ ರೈಲ್ವೆ ನಿಲ್ದಾಣವೆಂದೇ ಜನಪ್ರಿಯತೆ ಗಳಿಸಿಕೊಂಡಿದೆ. ಈ ರೈಲು ನಿಲ್ದಾಣವು ಬ್ರಿಟಿಷರ ಕಾಲದಲ್ಲಿ ಸ್ಥಾಪನೆ ಮಾಡಲಾಗಿತ್ತು. ಆ ವೇಳೆಯಲ್ಲಿ ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಾಜಧಾನಿ ಢಾಕಾ ನಡುವಿನ ಸರಕು ಸಾರಿಗೆ ಮಾರ್ಗವಾಗಿ ಬಳಸಲಾಗುತ್ತಿತ್ತು.

ಬ್ರಿಟಿಷರ ಕಾಲದಲ್ಲಿ ಈ ಪ್ರದೇಶವು ಜನದಟ್ಟಣೆಯಿಂದ ಕೂಡಿದ್ದರು ಕೂಡ ಇದೀಗ ನಿರ್ಜನ ಪ್ರದೇಶವಾಗಿದೆ. ಹೀಗಾಗಿ ಪ್ರಯಾಣಿಕರಿಲ್ಲದ ನಿಲ್ದಾಣವಾಗಿ ಇತಿಹಾಸದಲ್ಲಿ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಸರಕು ಸಾಗಾಣಿಕೆ ರೈಲುಗಳು ಮಾತ್ರ ಓಡಾಡುತ್ತವೆ. ಸದ್ಯಕ್ಕೆ ಈ ರೈಲು ನಿಲ್ದಾಣವನ್ನು ವ್ಯಾಪಾರಕ್ಕಾಗಿ ಮಾತ್ರ ಬಳಸಲಾಗುತ್ತಿದೆ.