Kannada News Photo gallery Influence of Mars Affects Scorpio, Sagittarius, Capricorn Zodiac Signs After October 2024 to July 2025
ಅಕ್ಟೋಬರ್ ನಂತರ 2025ರ ಜುಲೈ ತನಕ ಕುಜ ಗ್ರಹ ಪ್ರಭಾವದಿಂದ ಈ ಮೂರು ರಾಶಿಯವರಿಗೆ ಆತಂಕ
ಸ್ವಾತಿ ಎನ್ಕೆ | Updated By: ಅಕ್ಷಯ್ ಪಲ್ಲಮಜಲು
Updated on:
Sep 11, 2024 | 4:04 PM
ಈ ಲೇಖನದ ಆರಂಭದಲ್ಲಿಯೇ ಹೇಳಿಬಿಡುತ್ತಿದ್ದೇನೆ; ಎಚ್ಚರಿಕೆ ನೀಡಬೇಕು ಎಂಬ ಕಾರಣಕ್ಕಾಗಿಯೇ ಬರೆಯುತ್ತಿರುವಂಥದ್ದು. ಆದ್ದರಿಂದ ಸಮಾಧಾನದಿಂದ ಓದಿಕೊಳ್ಳಿ. ಅಕ್ಡೋಬರ್ 19ನೇ ತಾರೀಕಿನ ತನಕ ಮಿಥುನ ರಾಶಿಯಲ್ಲಿ ಕುಜ ಗ್ರಹ ಇರುತ್ತದೆ. ಆ ನಂತರ, ಅಂದರೆ 20.10.2024ರಿಂದ ಕರ್ಕಾಟಕ ರಾಶಿಗೆ ಬರುತ್ತದೆ. ಅಲ್ಲಿಂದ ಮಂಗಳನ ಸಂಚಾರ ಡೋಲಾಯಮಾನ ಆಗುತ್ತದೆ, ನಿಜವಾದ ಆತಂಕ ಆರಂಭವಾಗುತ್ತದೆ. ಏಕೆಂದರೆ ಕುಜ ಗ್ರಹ ಒಮ್ಮೆ ವಕ್ರಗತಿಯಲ್ಲಿ, ಒಮ್ಮೆ ತಟಸ್ಥವಾಗಿ ಹಾಗೂ ಸಮಗತಿಯಲ್ಲಿ ಇರುತ್ತದೆ. 21.1.2025ಕ್ಕೆ ಮತ್ತೆ ಮಿಥುನಕ್ಕೆ ಪ್ರವೇಶಿಸಿ, ಅಲ್ಲಿಂದ ಹಿಂದೆ ವಕ್ರಗತಿಯಲ್ಲಿ ಸಾಗಿ, ಮತ್ತೆ ಸಮಗತಿಗೆ ಬರುವುದು. ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)
1 / 5
3.4.2025ಕ್ಕೆ ಕರ್ಕಾಟಕ ರಾಶಿಯಲ್ಲಿ, ಆ ನಂತರ 7.6.2025ಕ್ಕೆ ಸಿಂಹ ರಾಶಿಗೆ ಕುಜನ ಪ್ರವೇಶವಾಗುತ್ತದೆ. ಅದಾದ ಮೇಲೆ ಅಲ್ಲಿಂದ ಸುಗಮ ಸಂಚಾರ 28.7.2025ರ ನಂತರ ಕನ್ಯಾ ತಲುಪುತ್ತದೆ. ಮತ್ತೆ ಡೋಲಾಯಮಾನ ಇರುವುದಿಲ್ಲ. ಹೆಚ್ಚಾಗಿ ಕುಜನ ಸಂಚಾರ ಡೋಲಾಯಮಾನ ಆಗುವುದು ಮಿಥುನ-ಕರ್ಕಾಟಕ-ಸಿಂಹ ಈ ಮೂರು ರಾಶಿಗಳಲ್ಲಿ. ಕರ್ಕಾಟಕದಲ್ಲಿ ಕುಜನು ನೀಚನಾಗುವ ಕ್ಷೇತ್ರ. ಅಂದರೆ, ಕುಜನ ಕಿರಣಗಳು ದುರ್ಬಲವಾಗುತ್ತದೆ, ದೂರ ಸರಿದಿರುತ್ತಾನೆ ಎಂದರ್ಥ. ಇದರ ಫಲ ಏನು ಎಂಬ ಪ್ರಶ್ನೆ ಮೂಡುತ್ತದೆ. ಯಾರು ವೃಶ್ಚಿಕ, ಧನು, ಮಕರ ರಾಶಿಯಲ್ಲಿ ಜನಿಸಿರುತ್ತಾರೋ ಅವರಿಗೆ ಒಮ್ಮೆ ಅಷ್ಟಮ, ಒಮ್ಮೆ ನವಮ ಸ್ಥಾನದ ಫಲ ದೊರೆಯುತ್ತದೆ. ಕುಜನಿಗೆ ಅಷ್ಟಮವು ಪೀಡನೆಯನ್ನು ನೀಡುವ ಕ್ಷೇತ್ರವೂ ನವಮವು ವ್ಯಸನ- ದುಃಖವನ್ನು ತರುವ ಕ್ಷೇತ್ರವಾಗುತ್ತದೆ.
2 / 5
ಈ ಗ್ರಹ ಸಂಚಾರದ ವೇಳೆಯಲ್ಲಿ ವೃಶ್ಚಿಕಾದಿ ಮೂರು ರಾಶಿಯವರು ಸ್ಪಷ್ಟತೆಯನ್ನು ಕಾಣಲು ಒದ್ದಾಡಬೇಕಾಗುತ್ತದೆ. ರೋಗ ಪೀಡಿತರು, ಕೋರ್ಟು, ಸೆರೆಮನೆ, ಪೊಲೀಸ್ ಬಂಧನದಲ್ಲಿ ಇರುವವರಿಗೆ ಒಮ್ಮೆ ಸಮಾಧಾನ, ಮತ್ತೆ ಆತಂಕ, ಒಮ್ಮ ಉದ್ವೇಗ ಆಗುತ್ತಿರುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರಕ್ತದೊತ್ತಡ, ಮಧುಮೇಹ ಇರುವವರಿಗಂತೂ ಹಿಂಸೆಯೇ. ಇನ್ನು ಈವತ್ತು ಕೋರ್ಟು ಆರ್ಡರ್ ಬರುತ್ತೋ ನಾಳೆ ಬರುತ್ತೋ? ಸಮಸ್ಯೆ ಉಲ್ಬಣವಾಗುತ್ತೋ ಪರಿಹಾರವಾಗುತ್ತೋ ಎಂಬ ಆತಂಕದಲ್ಲೇ ಮುಂದಿನ ಜುಲೈವರೆಗೆ ಇರಬೇಕಾಗುತ್ತದೆ.
3 / 5
ಕುಜ ಗ್ರಹವೆಂದರೆ ಕ್ಷಾತ್ರ, ಅಂದರೆ ಕ್ಷತ್ರಿಯ. ಯುದ್ಧ, ಕಲಹ ಸೂಚಕ. ಅದೇ ರೀತಿ ರಕ್ತ, ಮಜ್ಜೆ ಧಾತು ಕಾರಕ. ಆರೋಗ್ಯದ ವಿಚಾರದಲ್ಲಿ ಇದಕ್ಕೆ ಸಂಬಂಧಿತ ಸಮಸ್ಯೆಗಳು ಎದುರಾಗುತ್ತವೆ. ಒಮ್ಮೆ ವಿಪರೀತ, ಇನ್ನೊಮ್ಮೆ ಯಥಾಸ್ಥಿತಿಯ ಆತಂಕ ಸ್ಥಿತಿ ನಿರ್ಮಿಸುತ್ತಾನೆ. ಇದು ವ್ಯಕ್ತಿಗತ ಬದುಕಿಗೆ ಸಂಬಧಿಸಿದ್ದಾಗಿರುತ್ತದೆ. ವೃಶ್ಚಿಕ, ಧನುಸ್ಸು ಹಾಗೂ ಮಕರ ರಾಶಿ ಯಾರದೋ ಅವರು ಈ ಮೇಲ್ಕಂಡ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು.
4 / 5
ಇನ್ನು ಕುಜ ಗ್ರಹದ ಈ ಸಂಚಾರದಿಂದ ಜಗತ್ತಿನ ಮೇಲೆ ಏನು ಪರಿಣಾಮ ಬೀರಲಿದೆ ಎಂಬ ವಿಚಾರಕ್ಕೆ ಬರುವುದಾದರೆ, ಯುದ್ಧಗಳು ನಿಲ್ಲುವುದಿಲ್ಲ. ಅದು ಈಗಾಗಲೇ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇನ್ನು ಕೆಲವು ಕಡೆ ಯುದ್ಧವೂ ಆಗಿ, ಪ್ರಜೆಗಳಿಗೆ ಆತಂಕದ ಸ್ಥಿತಿಯು ಉಂಟಾದೀತು. ಒಟ್ಟಿನಲ್ಲಿ ಕುಜನು ಒಂದು ರೀತಿಯ ಭಯೋತ್ಪಾದನಾ ನೀತಿಯನ್ನು ಈ ಅವಧಿಯಲ್ಲಿ ಸೂಚಿಸುತ್ತಿರುತ್ತಾನೆ.
5 / 5
ಪ್ರಜೆಗಳಾಗಲೀ, ಸಮಸ್ಯೆ ಇದ್ದವರಾಗಲೀ ಆಸೆ- ಆಕಾಂಕ್ಷೆ, ಭರವಸೆಯನ್ನು ಕಳೆದುಕೊಳ್ಳುವ ಸಮಯವಾಗುತ್ತದೆ. ಇನ್ನು ಈ ಗೋಚರ ಸ್ಥಿತಿಯಿಂದ ಇದೇ ಕೊನೆಯೋ ಎನ್ನುವ ಹಾಗಿಲ್ಲ. ಜಾತಕದಲ್ಲಿ ಕುಜನ ಭಾವ ಬಲ, ಸ್ಥಾನ ಬಲ ಬಲಿಷ್ಟವಾಗಿದ್ದವರಿಗೆ ಅಪಾಯವೇನಿಲ್ಲ. ಆದರೆ ರಾಶ್ಯಾಧಿಪತಿ, ಲಗ್ನಾಧಿಪತಿ, ಯೋಗಕಾರಕ ಆಗಿದ್ದವರಿಗೆ ಅಪಾಯವನ್ನು ಹೇಳುವ ಹಾಗಿಲ್ಲ. ಎಲ್ಲಾದರೂ ಕುಜನಿಗೆ ಅಷ್ಟಮಾಧಿಪತ್ಯ, ಖರದ್ರೇಕ್ಕಾಣಾಧಿಪತ್ಯ, 64ನೇ ನವಾಂಶಾಧಿಪತ್ಯ, ದುಸ್ಥಾನಾಧಿಪತ್ಯ, ಕುಜ ದಶಾ- ಭುಕ್ತಿಯೂ ಆಗಿ, ಜಾತಕದಲ್ಲಿ ಕುಜನ ಚತುರ್ಥದಲ್ಲಿ ಪಾಪಗ್ರಹರಿದ್ದರೆ, ರಾಶಿ, ಲಗ್ನಕ್ಕೆ ಶತ್ರು ಆಗಿದ್ದರೆ ಅಪಾಯವಿರುತ್ತದೆ. ಇದು ಆತಂಕವೇ ಆಗಿರುತ್ತದೆ. ಆದರೂ ಈ ವಕ್ರ, ಸ್ಥಂಭನ ಸ್ಥಿತಿಯು ಮಾತ್ರ ಬಹಳ ಅಪಾಯಕಾರಿ.