
ಇಂದು ವಿಶ್ವ ಮಹಿಳಾ ದಿನ. ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಮಹಿಳಾ ಪ್ರಧಾನ ಚಿತ್ರಗಳ ಪ್ರಯೋಗಗಳು ನಡೆದಿವೆ. ಅದನ್ನು ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಈ ಸಾಲಿಗೆ ತೀರಾ ಇತ್ತೀಚಿನ ಹಲವು ಪ್ರಯತ್ನಗಳನ್ನೂ ಉದಾಹರಿಸಬಹುದು. ಎಲ್ಲಾ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ಜೈ ಎಂದಿರುವುದಲ್ಲದೇ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವುಗಳು ಚರ್ಚೆಗೆ ಒಳಗಾಗಿವೆ. ಅಂತಹ ಕೆಲವು ಚಿತ್ರಗಳ ಪಟ್ಟಿ ಇಲ್ಲಿದೆ.

ಫಣಿಯಮ್ಮ: ಎಂಕೆ ಇಂದಿರಾ ಅವರ ಇದೇ ಹೆಸರಿನ ಕಾದಂಬರಿಯನ್ನಾಧರಿಸಿದ ಈ ಚಿತ್ರವನ್ನು ಪ್ರೇಮಾ ಕಾರಂತ್ ನಿರ್ದೇಶಿಸಿದ್ದಾರೆ.

ರಂಗನಾಯಕಿ: ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ರಂಗನಾಯಕಿ’ ಅಶ್ವತ್ಥ ಅವರ ಇದೇ ಹೆಸರಿನ ಕತೆಯನ್ನು ಆಧರಿಸಿ ತಯಾರಾದ ಸಿನಿಮಾ. ಆರತಿ, ಅಂಬರೀಷ್ ಮೊದಲಾದ ತಾರೆಯರು ನಟಿಸಿದ್ದ ಈ ಚಿತ್ರ ಅಪಾರ ಮೆಚ್ಚುಗೆ ಗಳಿಸಿತ್ತು.

ಶರಪಂಜರ: ತ್ರಿವೇಣಿಯವರ ‘ಶರಪಂಜರ’ದಿಂದ ಆಯ್ದ ಅದೇ ಹೆಸರಿನ ಸಿನಿಮಾ ಇದು. ಚಿತ್ರವನ್ನು ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್.

ಗೆಜ್ಜೆಪೂಜೆ: ಕಲ್ಪನಾ, ಗಂಗಾಧರ್, ಲೀಲಾವತಿ ಮೊದಲಾದ ತಾರೆಯರು ಬಣ್ಣಹಚ್ಚಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ಪುಟ್ಟಣ್ಣ ಕಣಗಾಲ್.

ಬೆಂಕಿಯಲ್ಲಿ ಅರಳಿದ ಹೂವು: 1983ರಲ್ಲಿ ತೆರೆಕಂಡ ಈ ಚಿತ್ರವನ್ನು ಕೆ.ಬಾಲಚಂದರ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ಸುಹಾಸಿನಿ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ಗಂಟುಮೂಟೆ: ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ 2019ರಲ್ಲಿ ತೆರೆಗೆ ಬಂದಿತ್ತು. ಚಿತ್ರದ ಕತಾವಸ್ತು ಗಮನ ಸೆಳೆದಿದ್ದಲ್ಲದೇ ನಟರ ಪಾತ್ರ ಪೋಷಣೆಗಳು ಎಲ್ಲರಿಂದ ಮೆಚ್ಚುಗೆಗೆ ಒಳಗಾಗಿತ್ತು.

ನಾತಿಚರಾಮಿ: ಮಂಸೋರೆ ನಿರ್ದೇಶನದ, ಶೃತಿ ಹರಿಹರನ್ ನಟನೆಯ ‘ನಾತಿಚರಾಮಿ’ ಸಂದ್ಯಾ ರಾಣಿ ಅವರ ಕತೆಯನ್ನಾಧರಿಸಿದ ಚಿತ್ರ. ಇದಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.