Updated on: Mar 27, 2022 | 3:45 PM
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) IPL 2022 ರ ಸೀಸನ್ 15 ಗೂ ಆರಂಭಕ್ಕೂ ಮೊದಲು ಟೋಕಿಯೊ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಗೌರವಿಸಿ ಗಮನ ಸೆಳೆದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಐಪಿಎಲ್ ಆಯುಕ್ತ ಬ್ರಿಜೇಶ್ ಪಟೇಲ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಆಟಗಾರರ ಸಾಧನೆಗಾಗಿ ಗೌರವ ಧನ ನೀಡಿ ಪ್ರೋತ್ಸಾಹಿಸಿತು. ಕಳೆದ ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಕ್ರೀಡಾಪಟುಗಳು 7 ಪದಕಗಳನ್ನು ಗೆದ್ದಿದ್ದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಿಎಸ್‌ಕೆ ಮತ್ತು ಕೆಕೆಆರ್ ನಡುವಿನ ಹೊಸ ಸೀಸನ್ನ ಆರಂಭಕ್ಕೂ ಮೊದಲು, ಬಿಸಿಸಿಐ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ 1 ಕೋಟಿ ರೂಪಾಯಿ ಚೆಕ್ ನೀಡಿ ಗೌರವಿಸಿದೆ. ನೀರಜ್ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇದೇ ವೇಳೆ ಭಾರತದ ಯುವ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರನ್ನೂ ಮಂಡಳಿಯಿಂದ ಸನ್ಮಾನಿಸಲಾಯಿತು. ಲೊವ್ಲಿನಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರ ಸಾಧನೆಗಾಗಿ ಬಿಸಿಸಿಐ ಲೊವ್ಲಿನಾಗೆ 25 ಲಕ್ಷ ರೂ. ನೀಡಿದೆ.
ಹಾಗೆಯೇ ಟೋಕಿಯೊದಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡಕ್ಕೆ ಜಂಟಿಯಾಗಿ ಒಂದು ಕೋಟಿ 25 ಲಕ್ಷ ರೂಪಾಯಿ ಚೆಕ್ ನೀಡಲಾಯಿತು. ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರಿಂದ ಈ ಚೆಕ್ ಸ್ವೀಕರಿಸಿದರು.