
ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಸೀಸನ್ ಪ್ರಮುಖ ಬದಲಾವಣೆಯನ್ನು ಕಾಣಲಿದೆ. ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ, ತಂಡದ ನಾಯಕತ್ವವೂ ಸಿಕ್ಕಿದೆ. ಐದು ಕಪ್ಗಳನ್ನು ಗೆಲ್ಲಿಸಿದ ರೋಹಿತ್ ಶರ್ಮಾ ಅವರು ತಂಡದ ಮಾಜಿ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.

2023 ರ ODI ವಿಶ್ವಕಪ್‌ನಲ್ಲಿ ಗಾಯಗೊಂಡ ನಂತರ ಹಾರ್ದಿಕ್ ಪಾಂಡ್ಯ ದೀರ್ಘ ವಿರಾಮ ಪಡೆದಿದ್ದರು. ಇದೀಗ ಮೈದಾನಕ್ಕೆ ಮರಳಲು ಸಿದ್ಧರಾಗಿದ್ದಾರೆ. ಸಹಜವಾಗಿ ಎಲ್ಲರ ದೃಷ್ಟಿ ಅವರ ಫಿಟ್ನೆಸ್ ಮೇಲೆ ನೆಟ್ಟಿದೆ. ಮುಂಬೈ ಇಂಡಿಯನ್ಸ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಐಪಿಎಲ್ 2024 ರ ಸೀಸನ್ನಲ್ಲಿ ಬೌಲಿಂಗ್ ಮಾಡುತ್ತಾರೋ, ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಆಯೋಜಿಸಿದ್ದ ಸೀಸನ್ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್‌ನೆಸ್‌ಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದರಲ್ಲಿ ಅವರು ಮುಂದಿನ ಸೀಸನ್ನಲ್ಲಿ ಬೌಲಿಂಗ್ ಮಾಡುತ್ತೆನೆ ಎಂದು ಸ್ಪಷ್ಟಪಡಿಸಿದರು. ಐಪಿಎಲ್ ಸಮಯದಲ್ಲಿ ಎಲ್ಲಾ ಪಂದ್ಯಗಳನ್ನು ಆಡುತ್ತೇನೆ ಮತ್ತು ತಂಡಕ್ಕೆ ಅಗತ್ಯವಿದ್ದರೆ ಬೌಲಿಂಗ್ ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಫ್ರಾಂಚೈಸಿಗಾಗಿ ಆಡಲು ಸಿದ್ಧನಾಗಿದ್ದೇನೆ ಎಂದಿದ್ದಾರೆ.

ವಿಶ್ವಕಪ್‌ನಲ್ಲಿ ಆದ ಗಾಯಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ಗಾಯವಾಗಿಲ್ಲ ಎಂದು ಹಾರ್ದಿಕ್ ಸ್ಪಷ್ಟಪಡಿಸಿದ್ದಾರೆ. ನನ್ನ ಫಿಟ್ನೆಸ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಾನು ಈ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಾಗ, ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿ ಪ್ರಾರಂಭವಾಯಿತು ಮತ್ತು ಅದರ ನಂತರ ನಾನು ಆಡಬಹುದಾದ ಯಾವುದೇ ಸರಣಿಯನ್ನು ಆಡಲಿಲ್ಲ ಎಂದರು.

ಮುಂಬೈ ಇಂಡಿಯನ್ಸ್ ತಂಡವು 2024 ಸೀಸನ್ನ ತನ್ನ ಮೊದಲ ಪಂದ್ಯವನ್ನು ಮಾರ್ಚ್ 24 ರಂದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಆಡಲಿದೆ. ನಂತರ ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ತನ್ನ ಎರಡನೇ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
Published On - 9:37 pm, Tue, 19 March 24