Japamala: ಜಪಮಾಲೆ ಹಿಡಿದು ಮಂತ್ರ ಹೇಳುವುದು ಧಾರ್ಮಿಕತೆ ಅಷ್ಟೇ ಅಲ್ಲ, ಸಾಕಷ್ಟು ಆರೋಗ್ಯ ಸಂಬಂಧಿಸಿದ ಪ್ರಯೋಜನಗಳು ಇವೆ! ಅವು ಯಾವುವು?
TV9 Web | Updated By: ಸಾಧು ಶ್ರೀನಾಥ್
Updated on:
Oct 19, 2022 | 6:06 AM
Japamala or Prayer Beads: ಬಹಳಷ್ಟು ಜನರು ಜಪಮಾಲೆಯ ಪ್ರಯೋಜನ, ಅದರ ಮಹತ್ವವನ್ನು ತಿಳಿಯದೆಯೇ ಜಪಮಾಲೆ ಧರಿಸುತ್ತಾರೆ. ಯಾವೆಲ್ಲಾ ರೀತಿಯ ಜಪಮಾಲೆಯನ್ನು ಧರಿಸಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಜಪಮಾಲೆಯ ಪ್ರಯೋಜನಕಾರಿ ಮಾಹಿತಿ.
1 / 5
1. ಜಪಮಾಲೆ ಉತ್ತಮ ಆರೋಗ್ಯದ ಜಯಮಾಲೆ!
ಹಲವರಿಗೆ ಜಪಮಾಲೆ (Japamala or Prayer Beads) ಹಿಡಿದು ಮಂತ್ರ ಪಠಿಸುವುದರ ಪ್ರಯೋಜನವೇನೆನ್ನುವುದು ತಿಳಿದಿರುವುದಿಲ್ಲ. ಆದರೂ ಕೂಡ ಅವರು ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದು ಕೊಂಡಿರುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲ, ಆರೋಗ್ಯಕ್ಕೆ ಸಂಬಂಧಿಸಿದ ಸಾಕಷ್ಟು ಪ್ರಯೋಜನಗಳೂ ಇವೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು ಪಠಿಸುವುದರಿಂದ ಮನಸ್ಸು ಸ್ಥಿರತೆಯನ್ನು ಕಳೆದುಕೊಳ್ಳುವುದಿಲ್ಲ. ಅ ಸಮಯದಲ್ಲಿ ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ.
2 / 5
2. ತುಳಸಿ ಜಪಮಾಲೆ:
ತುಳಸಿ ಜಪಮಾಲೆಯು ಓರ್ವ ವ್ಯಕ್ತಿಯ ಮನಸ್ಸಿನಲ್ಲಿ ಶಾಂತ ಭಾವನೆಯನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಮನೆಯಲ್ಲಿ ಜನರು ತುಳಸಿ ಜಪಮಾಲೆಯನ್ನು ಹಿಡಿದು ಮಂತ್ರ ಪಠಿಸಬಾರದು. ದೈವಿಕ ಶಕ್ತಿ ಇರುವ ಸ್ಥಳಗಳಲ್ಲಿ ಜಪಿಸಬಹುದು. ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿ ಆಹಾರವನ್ನು ಸೇವಿಸುವುದರಿಂದ ಅಶ್ವಮೇಧ ಯಾಗದ ಫಲ ದೊರೆಯುತ್ತದೆ ಎಂದು ಪದ್ಮಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕುತ್ತಿಗೆಯಲ್ಲಿ ತುಳಸಿ ಹಾರವನ್ನು ಧರಿಸಿ ಸ್ನಾನ ಮಾಡುವುದರಿಂದ ಎಲ್ಲಾ ತೀರ್ಥಯಾತ್ರೆಗಳಲ್ಲಿ ಸ್ನಾನ ಮಾಡಿದ ಫಲ ಆ ವ್ಯಕ್ತಿಯದ್ದಾಗುತ್ತದೆ. ಸಾವಿನ ಸಂದರ್ಭದಲ್ಲಿ ಆ ವ್ಯಕ್ತಿಯು ತುಳಸಿ ಹಾರವನ್ನು ಕುತ್ತಿಗೆಯಲ್ಲಿ ಧರಿಸಿದ್ದರೆ ಆತನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.
3 / 5
3. ರುದ್ರಾಕ್ಷಿ ಮಾಲೆ:
ರುದ್ರಾಕ್ಷಿ ಮಾಲೆಯನ್ನು ಕೈಯಲ್ಲಿ ಹಿಡಿದು ಶಿವನನ್ನು ಆರಾಧಿಸುವುದು ಶಿವಾರಾಧನೆಯ ವಿಧಾನವಾಗಿದೆ. ಇದರಿಂದ ರುದ್ರಾಕ್ಷ ಧಾರ ಪರಶಿವನು ಪ್ರಸನ್ನನಾಗುತ್ತಾನೆ. ರುದ್ರಾಕ್ಷಿಯನ್ನು ಶಿವನ ಒಂದು ಅಂಶವೆಂದು ಹಿಂದೂ ಧರ್ಮದಲ್ಲಿ ಪರಿಗಣಿಸಲಾಗುತ್ತದೆ. ಅಷ್ಟು ಮಾತ್ರವಲ್ಲ, ರುದ್ರಾಕ್ಷಿಯ ಸೃಷ್ಟಿಗೂ ಕೂಡ ಆ ಪರಶಿವನೇ ಕಾರಣೀಭೂತನೆಂದು ಹೇಳಲಾಗುತ್ತದೆ. ಆದ್ದರಿಂದ ಶಿವನಿಗೆ ರುದ್ರಾಕ್ಷಿ ಹಾರವನ್ನು ಹಾಕಿ ಹೆಚ್ಚಾಗಿ ಪೂಜಿಸಲಾಗುತ್ತದೆ.
4 / 5
4. ಕೆಂಪು ಚಂದನ ಮತ್ತು ಕಮಲ ಬೀಜದ ಮಾಲೆ:
ಕೆಂಪು ಚಂದನದ ಹಾರವನ್ನು ಮತ್ತು ಕಮಲ ಬೀಜದ ಮಾಲೆಯನ್ನು ಲಕ್ಷ್ಮೀ ಪೂಜೆ ಮತ್ತು ದುರ್ಗಾ ಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಹಾಗೂ ದುರ್ಗಾ ದೇವಿಯನ್ನು ಒಲಿಸಿಕೊಳ್ಳಲು ಕೆಂಪು ಚಂದನದ ಹಾರವನ್ನು ಬಳಸಬೇಕು. ಕೆಂಪು ಚಂದನದ ಮಾಲೆಯಿಂದ ಮತ್ತು ಕಮಲ ಬೀಜದ ಮಾಲೆಯಿಂದ ದುರ್ಗೆಯನ್ನು ಮತ್ತು ಲಕ್ಷ್ಮಿಯನ್ನು ಜಪಿಸಿದರೆ ಸಿರಿ, ಸಂಪತ್ತು, ಸಂತೋಷ, ಸೌಭಾಗ್ಯ ಮನೆಯಲ್ಲಿ ನೆಲೆಯಾಗುತ್ತದೆ.
5 / 5
5. ಸ್ಪಟಿಕ ಮಾಲೆ
ಸ್ಪಟಿಕ ಮಾಲೆಯನ್ನು ತಾಂತ್ರಿಕ ಜನರು ಹೆಚ್ಚಾಗಿ ಉಪಯೋಗಿಸುತ್ತಾರೆ. ಸ್ಪಟಿಕ ಮಾಲೆಯು ಧರಿಸುವುದರಿಂದ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ವಿಶೇಷ ಮಂತ್ರ ಅಥವಾ ಸ್ತೋತ್ರದ ಮೂಲಕ ಈ ಮಾಲೆಯನ್ನು ಧರಿಸಿದರೆ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಸ್ಪಟಿಕ ಮಾಲೆಯು ಅತ್ಯಂತ ಶಕ್ತಿಯುತ ಮಾಲೆಯಾಗಿದ್ದು, ಈ ಮಾಲೆಯನ್ನು ಲಕ್ಷ್ಮೀ ದೇವಿಯೆಂದು ಪರಿಗಣಿಸಲಾಗುತ್ತದೆ. 108 ಸ್ಪಟಿಕ ಮಣಿಯಿರುವ ಮಾಲೆಯು ಶುಕ್ರವಾರದ ಶುಭ ದಿನವನ್ನು ಪ್ರತಿನಿಧಿಸುತ್ತದೆ. ಸ್ಪಟಿಕ ಮಾಲೆಯು ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ದೂರಾಗಿಸಿ, ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಾಲೆಯನ್ನು ಧರಿಸುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಸ್ಪಟಿಕ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ನಮ್ಮ ಏಕಾಗ್ರತೆಯು ಹೆಚ್ಚಾಗುತ್ತದೆ ಹಾಗೂ ಕೋಪ ನಿಯಂತ್ರಣಕ್ಕೆ ಬರುತ್ತದೆ.
ಪ್ರತಿನಿತ್ಯ ಒಂದಷ್ಟು ಸಮಯವನ್ನು ಜಪಮಾಲೆಯಿಂದ ಮಂತ್ರ ಪಠಿಸಲು ಮೀಸಲಿರಿಸಬೇಕು. ಇದರಿಂದ ಆ ವ್ಯಕ್ತಿಯ ಏಕಾಗ್ರತೆ ಹೆಚ್ಚಾಗುತ್ತದೆ. ಅದರಲ್ಲೂ ಮೇಲೆ ಹೇಳಿರುವ ಜಪಮಾಲೆಯನ್ನು ಹಿಡಿದು, ದೇವರನ್ನು ಆರಾಧಿಸುವುದರಿಂದ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ. (ಲೇಖನ: ಪ್ರಸನ್ನ ಕುಮಾರ್)