Kannada News Photo gallery Kambala sport got the luster of modern technology Adoption of automatic gate, photo finish technology
ಕಂಬಳ ಕ್ರೀಡೆಗೆ ಬಂತು ಆಧುನಿಕ ತಂತ್ರಜ್ಞಾನದ ಮೆರುಗು; ಆಟೋಮ್ಯಾಟಿಕ್ ಗೇಟ್, ಫೋಟೋ ಫಿನಿಶ್ ತಂತ್ರಜ್ಞಾನ ಅಳವಡಿಕೆ
ಕರಾವಳಿಯ ಜಾನಪದ ಕ್ರೀಡೆ ಕಂಬಳ ಇಂದು ಜಗತ್ಪ್ರಸಿದ್ದವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಕಂಬಳ ಆಧುನಿಕ ತಂತ್ರಜ್ಞಾನದ ಟಚ್‌ನ್ನು ಪಡೆಯುತ್ತಿದೆ. ಇದೀಗ ಕಂಬಳದಲ್ಲಿ ನಿಖರ ಫಲಿತಾಂಶ ನೀಡಲು, ಜೊತೆಗೆ ನಿಗದಿತ ಸಮಯದೊಳಗೆ ಕಂಬಳ ಮುಗಿಸಲು ನೂತನವಾಗಿ ಸ್ವಯಂ ಚಾಲಿತ ಗೇಟ್ ಹಾಗೂ ಫೋಟೊ ಫಿನಿಶ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
1 / 7
ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ತುಳುನಾಡ ಜನಪದ ಕ್ರೀಡೆಯಾಗಿ ಬೆಳೆದಿರುವ ಕಂಬಳ, ಇಂದು ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿನ ರೈತಾಪಿ ಜನ ತಮ್ಮ ಕೃಷಿ ಕಾರ್ಯಗಳಿಗೆ ಬಳಸುವ ಕೋಣಗಳನ್ನು ಪಳಗಿಸಿ ಅವುಗಳನ್ನು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದು ಪ್ರತಿಷ್ಠೆ ಮೆರೆಯುವ ತನಕ ಈ ಕ್ರೀಡೆ ಇಂದು ಬೆಳೆದು ನಿಂತಿದೆ.
2 / 7
ವರ್ಷದಿಂದ ವರ್ಷಕ್ಕೆ ಕಂಬಳ ಬೆಳೆಯುತ್ತಿದ್ದಂತೆ, ಕಂಬಳಕ್ಕೆ ಆಧುನಿಕ ಟಚ್ ನೀಡುವ ಕೆಲಸವು ಆಗುತ್ತಿದೆ. ಲೇಸರ್ ಫಿನಿಶಿಂಗ್ ತಂತ್ರಜ್ಞಾನದ ಮೂಲಕ ಕೋಣಗಳ ಓಟದ ಫಲಿಂತಾಶ ನೀಡುತ್ತಿದ್ದ ಈ ಕಂಬಳ ಕ್ರೀಡೆಯಲ್ಲಿ, ಇದೀಗ ಅಟೋಮ್ಯಾಟಿಕ್ ಗೇಟ್ ಹಾಗೂ ಫೋಟೊ ಫಿನಿಶ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.
3 / 7
ನಿಗದಿತ ಸಮಯದೊಳಗೆ ಕಂಬಳ ಮುಗಿಸಲು ಸ್ವಯಂ ಚಾಲಿತ ಗೇಟ್ ಹಾಗೂ ನಿಖರ ಫಲಿತಾಂಶಕ್ಕಾಗಿ ಫೋಟೊ ಫಿನಿಶ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಿಲ್ಲಾ ಕಂಬಳ ಸಮಿತಿ ಮಂಗಳೂರಿನ ಕಿನ್ನಿಗೋಳಿಯಲ್ಲಿ ನಡೆದ ಐಕಳಬಾವ ಕಂಬಳದಲ್ಲಿ ಅಳವಡಿಸಿಕೊಂಡಿದೆ.
4 / 7
ಈ ಹಿಂದೆ ಕಂಬಳವನ್ನು 24 ಗಂಟೆಯಲ್ಲಿ ಮುಗಿಸಲಾಗುತಿತ್ತು. ಆದ್ರೆ, ಇದೀಗ ಕಂಬಳಕ್ಕೆ ಬರುವ ಕೋಣಗಳ ಸಂಖ್ಯೆ ಹೆಚ್ಚಾದಂತೆ ಒಂದು ದಿನದಲ್ಲಿ ಮುಗಿಯುತ್ತಿದ್ದ ಕಂಬಳ ಎರಡು ದಿನಕ್ಕೆ ಕಾಲಿಡುತ್ತಿದೆ. ಅದರಲ್ಲೂ ಫೈನಲ್ ಹಣಾಹಣಿಯಲ್ಲಿ ಕೋಣಗಳನ್ನು ಸ್ಟಾರ್ಟಿಂಗ್ ಪಾಯಿಂಟ್‌ನಲ್ಲಿ ಓಟಕ್ಕೆ ಅಣಿಗೊಳಿಸಿ ಓಟ ಪ್ರಾರಂಭಿಸಲು ಸಾಕಷ್ಟು ಸಮಯವನ್ನು ತೆಗದುಕೊಳ್ಳಲಾಗುತ್ತಿದೆ.
5 / 7
ಇದು ಆಯೋಜಕರಿಗೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಹೀಗಾಗಿ ನಿಗದಿಪಡಿಸಿದ ಅವಧಿಯೊಳಗೆ ಕೋಣಗಳನ್ನು ಬಿಡಲು ಈ ನೂತನ ತಂತ್ರಜ್ಞಾನ ಜಾರಿಗೊಳಿಸಲಾಗಿದೆ. ಸದ್ಯ ಕೋಣಗಳನ್ನು ಅಣಿಗೊಳಿಸಲು ನಿಗದಿತ ಸಮಯವನ್ನು ನೀಡಲಾಗಿದೆ. ಈ ನಿಗದಿತ ಸಮಯದೊಳಗೆ ಕೋಣಗಳನ್ನು ಬಿಡದಿದ್ದರೆ ಗೇಟ್ ಬೀಳುತ್ತದೆ.
6 / 7
ಇದಾದ ನೂರು ಸೆಕೆಂಡ್ನಿಂದ ಹತ್ತು ಸೆಕೆಂಡ್ವರೆಗೆ ರೆಡ್ ಲೈಟ್, ಹತ್ತರಿಂದ ಒಂದು ಸೆಕೆಂಡ್ ವರೆಗೆ ಹಳದಿ ಲೈಟ್, ಝಿರೋ ಸೆಕೆಂಡ್ ಆದಾಗ ಹಸಿರು ಲೈಟ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣಗಳನ್ನು ಬಿಡಬೇಕು. ಇಲ್ಲದಿದ್ದರೆ ಆ ಕೋಣಗಳನ್ನು ಸ್ಪರ್ಧೆಯಿಂದ ಹೊರಗಿಡುವ ನಿರ್ಧಾರ ಮಾಡಲಾಗಿದೆ. ಇನ್ನು ಫೋಟೋ ಫಿನಿಶಿಂಗ್ ತಂತ್ರಜ್ಞಾನದಲ್ಲಿ ಯಾವ ಕೋಣ ಮೊದಲು ಗುರಿ ತಲುಪಿದೆ ಎಂದು ನಿಖರವಾಗಿ ತಿಳಿಯುತ್ತೆ.
7 / 7
ಇದರಿಂದ ಒಂದೇ ಸಲ ನಿಖರವಾದ ಫಲಿತಾಂಶ ದೊರಕಿ ಗೊಂದಲಗಳ ನಿವಾರಣೆ ಜೊತೆ ಸಮಯವು ಉಳಿತಾಯ ಆಗಲಿದೆ. ಒಟ್ಟಿನಲ್ಲಿ ನೂತನ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು ಮುಂದೆ ಇದು ಕಂಬಳ ಸಮಿತಿಗೆ, ಕೋಣಗಳ ಮಾಲೀಕರಿಗೆ ಯಶಸ್ಸು ತಂದುಕೊಡುತ್ತಾ ಎಂದು ಕಾದುನೋಡಬೇಕಾಗಿದೆ.