Kannada News Photo gallery Kara full moon Fest held in grandeur at Kakhandaki, Here's a glimpse of this black man driving the bulls
Vijayapura: ಅದ್ದೂರಿಯಾಗಿ ನಡೆದ ಕಾರ ಹುಣ್ಣಿಮೆಯ ಕರಿ; ಎತ್ತುಗಳನ್ನು ರೊಚ್ಚಿಗೆಬ್ಬಿಸಿ ಓಡಾಡಿಸುವ ಈ ಕರಿಯ ಝಲಕ್ ಇಲ್ಲಿದೆ ನೋಡಿ
ಕಾಖಂಡಕಿ ಕರಿ ನೋಡಬೇಕು, ಮಮದಾಪುರ ಕೆರೆ ನೋಡಬೇಕು ಎಂಬ ಈ ಭಾಗದ ಗಾದೆ ಮಾತಿನಂತೆ, ಈ ವರ್ಷವೂ ಕಾಖಂಡಕಿ (Kakhandaki)ಯಲ್ಲಿ ಕಾರ ಹುಣ್ಣಿಮೆಯ ಕರಿ ಅದ್ದೂರಿಯಾಗಿ ನಡೆಯಿತು. ಹೌದು ಕಾರಹುಣ್ಣಿಮೆಯಾದ ಏಳನೇ ದಿನಕ್ಕೆ ನಡೆಯುವ, ಈ ಕರಿ ಹರಿಯುವ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಏಳು ಊರುಗಳಿಂದ ಎತ್ತುಗಳು ಬಂದಿದ್ದವು. ಎತ್ತುಗಳು ಜನರನ್ನು ಎತ್ತೆತ್ತಿ ಒಗೆಯುವ ದೃಶ್ಯಗಳು ನೋಡುಗರಲ್ಲಿ ರೋಮಾಂಚನ ಹಾಗೂ ಭಯ ಹುಟ್ಟಿಸಿದ್ದು, ಇದರ ಝಲಕ್ ಇಲ್ಲಿದೆ ನೋಡಿ.
1 / 7
ವಿಜೃಂಭಣೆಯಿಂದ ನಡೆದ ಕಾಖಂಡಕಿ ಕರಿ, ಎತ್ತು ಹೋರಿಗಳ ರೋಷಾವೇಶಕ್ಕೆ ಅವಘಡ, ಹೋರಿಯ ಆರ್ಭಟಕ್ಕೆ ಆಸ್ಪತ್ರೆ ಸೇರಿದ ಹಲವರು, ಪ್ರಾಣ ಪಣಕ್ಕಿಟ್ಟು ನಡೆಯುವ ಕರಿ ಹರಿಯುವ ಸಂಭ್ರಮ. ಹೌದು ಇಂತಹದ್ದೊಂದು ಬಲು ರೋಮಾಂಚನಕಾರಿ ಹಾಗೂ ಅಪಾಯಕಾರಿಯಾದ ಕರಿ ಹರಿಯುವ ಸಂಭ್ರಮ ಕಂಡುಬಂದಿದ್ದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ.
2 / 7
ಕಾರಹುಣ್ಣಿಮೆ ಆದ ಏಳನೇ ದಿನಕ್ಕೆ ನಡೆಯುವ ಈ ಕರಿ ಹರಿಯುವ ಸಂಭ್ರಮ ಭರ್ಜರಿಯಾಗಿರುತ್ತದೆ. ಕಾಖಂಡಕಿ ಸುತ್ತಮುತ್ತಲ 7 ಊರುಗಳಿಂದ ಬರುವ ಎತ್ತುಗಳನ್ನು ಮದ್ಯಾಹ್ನದ ವೇಳೆಗೆ ಬಣ್ಣ ಹಚ್ಚಿ, ರಿಬ್ಬಿನ್ ಕಟ್ಟಿ, ಬಣ್ಣ ಬಣ್ಣದ ಬಟ್ಟೆ ಸುತ್ತಿ ರೆಡಿ ಮಾಡಲಾಗಿರುತ್ತದೆ. ಈ ವೇಳೆ ಕಾಖಂಡಕಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜನ್ರು ಈ ಎತ್ತುಗಳ ಓಡಾಟ ಹಾಗೂ ಕಾದಾಟವನ್ನು ನೋಡಲು ಜನ ಕಿಕ್ಕಿರಿದು ಸೇರಿರುತ್ತಾರೆ.
3 / 7
ಇಲ್ಲಿಗೆ ಬರುವ ಪ್ರತಿಯೊಂದು ಎತ್ತಿಗೆ ಸುತ್ತಲೂ ನಾಲ್ಕೂ ಕಡೆಗಳಿಂದ ಉದ್ದವಾದ ಹಗ್ಗವನ್ನು ಕಟ್ಟಿ ಎಳೆದಾಡಲಾಗುತ್ತದೆ. ಈ ವೇಳೆ ಮದ್ಯದಲ್ಲಿ ಹೋಗುವ ಓರ್ವ ವ್ಯಕ್ತಿ ಉದ್ದನೆಯ ಕಟ್ಟಿಗೆಗೆ ಬಟ್ಟಣ ಬಟ್ಟೆ ಕಟ್ಟಿಕೊಂಡು ಎದಕ್ಕೆ ತಿವಿಯುತ್ತಾನೆ. ಹೀಗೆ ಮಾಡುವುದರಿಂದ ರೊಚ್ಚಿಗೆದ್ದ ಎತ್ತುಗಳು ಸುತ್ತಮುತ್ತಲು ಇರುವವರಿಗೆ ಹಾಯಲು ಬರುತ್ತವೆ. ಈ ರೋಮಾಂಚನ ದೃಶ್ಯ ನೋಡಲು ಸೇರಿದ ಜನರಲ್ಲಿ ಕೆಲವರು ಈ ರೊಚ್ಚಿಗೆದ್ದ ಎತ್ತುಗಳ ಕೈಗೆ ಸಿಕ್ಕಿಕೊಂಡು ತಿವಿತಕ್ಕೆ ಹಾಗೂ ತುಳಿತಕ್ಕೆ ಒಳಗಾಗುತ್ತಾರೆ.
4 / 7
ಮದ್ಯಾಹ್ನ 2ಗಂಟೆ ವೇಳೆಗೆ ಶುರುವಾಗುವ ಈ ಕರಿ ಹರಿಯುವ ಸಂಭ್ರಮದ ಆಟ ಮೂರು ಗಂಟೆಗಳವರೆಗೆ ಅಂದರೆ ಸಾಯಂಕಾಲ 5 ರ ವರೆಗೆ ನಡೆಯುತ್ತದೆ. ಸಾಮಾನ್ಯವಾಗಿ ಎತ್ತುಗಳಿಗೆ ಕೆರಳಿಸಿದಾಗ ಅವು ಮದವೇರಿದಂತಾಗಿ ಸಿಕ್ಕ ಸಿಕ್ಕವರನ್ನು ಕೊಂಬಿನಿಂದ ಎತ್ತೆತ್ತಿ ಒಗೆಯುತ್ತವೆ. ಈ ಬಾರಿಯೂ ಇಂತಹದ್ದೇ ಕಾರಹುಣ್ಣಿವೆ ಕರಿ ನಡೆದಿದ್ದು, ಈ ಬಾರಿಯೂ ಐದಾರು ಜನ್ರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
5 / 7
ಕಳೆದ ಬಾರಿ 2022ರಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ್ರೆ, ಇದೇ ಅವಘಡಕ್ಕೆ ಸಿಲುಕಿ 2021ರಲ್ಲಿ ನಡೆದ ಕಾರಹುಣ್ಣಿವೆ ಸಂಭ್ರಮದಲ್ಲಿ ಎತ್ತು ತಿವಿದು ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದ. ಸುತ್ತಮುತ್ತಲಿನ ಏಳು ಊರುಗಳ ಜನ್ರು ಸೇರಿ ಆಚರಿಸುವ ಎತ್ತುಗಳ ಮೂಲಕ ಈ ಕರಿ ಹರಿಯುವ ಕಾರ್ಯಕ್ರಮ ನೋಡಲು ಎಷ್ಟು ರೋಮಾಂಚನಕಾರಿಯಾಗಿದೆಯೋ, ಎತ್ತುಗಳ ಅಡಿಯಲ್ಲಿ ಸಿಲುಕುವುದು ಅಷ್ಟೇ ಅಪಾಯಕಾರಿಯಾಗಿದೆ.
6 / 7
ಬಣ್ಣ ಬಳಿದು, ಗಂಟೆ, ಗೆಜ್ಜೆ ಕಟ್ಟಿ ಎತ್ತುಗಳನ್ನು ಶೃಂಗರಿಸಿದ ಬಳಿಕ ಅವುಗಳಿಗೆ ಸುತ್ತಲೂ ಹಗ್ಗಗಳಿಂದ ಕಟ್ಟಿರುತ್ತಾರೆ. ಈ ವೇಳೆ ಮದ್ಯದಲ್ಲಿ ಬಂದು ಅವುಗಳನ್ನು ರೊಚ್ಚಿಗೆಬ್ಬಿಸುವ ಮೂಲಕ ಕರಿ ಹರಿಯುವ ಆಚರಣೆ ಮಾಡಲಾಗುತ್ತದೆ.
7 / 7
ಈ ಆಚರಣೆಯಲ್ಲಿ ಆಗುವ ಅವಘಡಗಳನ್ನು ತಪ್ಪಿಸಲು ನೋಡಲು ಬರುವ ಜನರು ಹಾಗೂ ಆಯೋಜಕರು ಮುಂಜಾಗೃತೆ ವಹಿಸಬೇಕಿದೆ.