
ಮದುವೆ ಸೀಸನ್ ಶುರುವಾಗಿದೆ. ಜನರು ಹೆಚ್ಚು ಹೆಚ್ಚು ಚಿನ್ನಾಭರಣಗಳನ್ನು ಖರೀದಿಸುತ್ತಿದ್ದಾರೆ. ಹಾಗಾದ್ರೆ ಚಿನ್ನಾಭರಣಗಳನ್ನು ಖರೀದಿಸುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳನ್ನು ತಿಳಿಯೋಣ.

ಚಿನ್ನ ಖರೀದಿಯ ಮುನ್ನ ನಿಮ್ಮ ನಗರದಲ್ಲಿರುವ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಿ. ನೀವು ಎಷ್ಟು ಕ್ಯಾರೆಟ್ ಚಿನ್ನವನ್ನು ಖರೀದಿಸಲು ಬಯಸುತ್ತೀರಿ ಎಂಬುದನ್ನು ಮೊದಲೇ ನಿರ್ಧರಿಸಿ. ಕ್ಯಾರೆಟ್‌ನಿಂದ ಚಿನ್ನದ ಆಭರಣಗಳ ಗುಣಮಟ್ಟ ಮತ್ತು ಬೆಲೆಯಲ್ಲಿ ವ್ಯತ್ಯಾಸವಿದೆ ಎಂಬುದನ್ನು ನೆನಪಿನಲ್ಲಿಡಿ. ಮತ್ತು ಪ್ರಮುಖವಾಗಿ ನೀವು ನಂಬುವ ಅಂಗಡಿಯಿಂದ ಚಿನ್ನ ಖರೀದಿಸಿ.

ಆಭರಣದ ಬೆಲೆ, ಮೇಕಿಂಗ್ ಚಾರ್ಜ್, ಜಿಎಸ್ಟಿ ಇತ್ಯಾದಿಗಳನ್ನು ಗಮನಿಸಿ. ಚಿನ್ನಾಭರಣ ಖರೀದಿಸುವ ಮುನ್ನ ಆಭರಣದ ತೂಕವನ್ನು ಪರಿಶೀಲಿಸಿ.

ಕ್ಯಾರೆಟ್ ಚಿನ್ನವು 1/24 ಪ್ರತಿಶತ ಚಿನ್ನವಾಗಿರುತ್ತದೆ. ನಿಮ್ಮ ಆಭರಣವು 22 ಕ್ಯಾರೆಟ್ ಆಗಿದ್ದರೆ, 22 ಅನ್ನು 24 ರಿಂದ ಭಾಗಿಸಿ ಮತ್ತು 100 ರಿಂದ ಗುಣಿಸಿ. (22/24)x100= 91.66 ಎಂದರೆ ನಿಮ್ಮ ಆಭರಣದಲ್ಲಿ ಬಳಸಿದ ಚಿನ್ನದ ಶುದ್ಧತೆ 91.66%. ಉದಾ: ಟಿವಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 27000 ರೂ. ಆಗಿದ್ದರೆ, ನೀವು ಅದನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಹೋದರೆ, ಆಗ 22 ಕ್ಯಾರೆಟ್ ಚಿನ್ನದ ಬೆಲೆ (27000/24)x22=24750 ರೂ. ಒಬ್ಬ ಆಭರಣ ವ್ಯಾಪಾರಿ ನಿಮಗೆ 22 ಕ್ಯಾರೆಟ್ ಚಿನ್ನವನ್ನು 27000 ರೂ.ಗೆ ನೀಡುತ್ತಾನೆ. ಹಾಗಾದ್ರೆ ನೀವು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ಚಿನ್ನವನ್ನು ಖರೀದಿಸುತ್ತಿದ್ದೀರಿ ಎಂದರ್ಥ. ಗ್ರಾಹಕರು ಹೆಚ್ಚಾಗಿ ಮೋಸ ಹೋಗುವುದು ಕೂಡ ಹೀಗೆ.

ಹಾಲ್‌ಮಾರ್ಕ್ ನೋಡಿಕೊಂಡು ಚಿನ್ನವನ್ನು ಖರೀದಿಸುವುದು ಉತ್ತಮ. ಹಾಲ್ಮಾರ್ಕ್ ಅಧಿಕೃತ ಗ್ಯಾರಂಟಿಯಾಗಿದ್ದು, ಇದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ನಿರ್ಧರಿಸುತ್ತದೆ.