ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಮತ್ತು 4ನೇ ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರರೇ ಉಳಿದ ಪಂದ್ಯಗಳಿಗೂ ಆಯ್ಕೆಯಾಗಿದ್ದಾರೆ.
ಅಂದರೆ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗಿಲ್ಲ. ಹಾಗೆಯೇ ವಿಕೆಟ್ ಕೀಪರ್ ಭರತ್, ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಟೀಮ್ ಇಂಡಿಯಾದಲ್ಲಿ ಉಳಿಸಿಕೊಳ್ಳಲಾಗಿದೆ.
ಇನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಉಮೇಶ್ ಯಾದವ್ಗೆ ಸ್ಥಾನ ಕಲ್ಪಿಸಲಾಗಿದೆ. ಹಾಗೆಯೇ 2ನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದ ಜಯದೇವ್ ಉನಾದ್ಕಟ್ ಅವರನ್ನು ಉಳಿದ ಎರಡು ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿದೆ. ದೆಹಲಿ ಟೆಸ್ಟ್ ಪಂದ್ಯಕ್ಕೂ ಮುನ್ನ ಜಯದೇವ್ ಅವರನ್ನು ರಣಜಿ ಟ್ರೋಫಿ ಫೈನಲ್ ಆಡುವಂತೆ ಬಿಸಿಸಿಐ ಕೇಳಿಕೊಂಡಿತ್ತು.
ಇದೀಗ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಜಯದೇವ್ ಉನಾದ್ಕಟ್ ಇದೀಗ ಮತ್ತೆ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರ ಹೊರತಾಗಿ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.
Published On - 6:02 pm, Sun, 19 February 23