Kannada News Photo gallery Khanapura in Belagavi: No buses! School children walking in fear of life in front of wild animals for education
ಖಾನಾಪುರ: ಬಸ್ಸುಗಳೆ ಇಲ್ಲ! ಕಲಿಕೆಗಾಗಿ ಕಾಡಂಚಿನಲ್ಲಿ ಕಾಡುಪ್ರಾಣಿಗಳ ಎದುರು ಜೀವ ಭಯದಲ್ಲೇ ಕಾಲ್ನಡಿಗೆ ಹಾಕುವ ಶಾಲಾ ಮಕ್ಕಳು!
Sahadev Mane | Updated By: ಸಾಧು ಶ್ರೀನಾಥ್
Updated on:
Jul 15, 2023 | 6:32 PM
ಒಟ್ಟಾರೆ ಕಾಡಂಚಿನಲ್ಲಿದ್ರೂ ಓದಿ ಎನಾದ್ರೂ ಸಾಧನೆ ಮಾಡಬೇಕು ಅಂತಾ ಸಾವಿರಾರು ವಿದ್ಯಾರ್ಥಿಗಳು ಜೀವ ಒತ್ತೆ ಇಟ್ಟು ಕಾಡಿನಲ್ಲಿ ನಡೆದುಕೊಂಡು ಬಂದು ಕಲಿಕೆ ಮುಂದುವರೆಸಿದ್ದಾರೆ. ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದ್ರೂ ಈ ವರೆಗೂ ಸ್ಪಂದಿಸುವ ಕೆಲಸ ಮಾಡಿಲ್ಲ
1 / 7
ದಟ್ಟ ಕಾಡಂಚಿನ ಗ್ರಾಮಗಳ ಮಕ್ಕಳ ಅರಣ್ಯರೋದಕ್ಕೆ ಕೊನೆಯೆ ಇಲ್ಲದಂತಾಗಿದೆ. ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡೆ ಹೋಗುವ ಸ್ಥಿತಿ ಇನ್ನೂ ಜೀವಂತ ಇದೆ. ಕಾಡು ಪ್ರಾಣಿಗಳ ಭಯದ ನಡುವೆ ವಿದ್ಯಾಭ್ಯಾಸ ಮುಂದುವರೆಸುವ ಅನಿವಾರ್ಯತೆ ಮಕ್ಕಳಿಗಿದ್ದು ದಟ್ಟ ಕಾಡಿನಲ್ಲೇ ಬರ್ತಾರೆ ಮಕ್ಕಳು. ಬಸ್ ಗಳನ್ನೇ ನೋಡದ ಈ ಭಾಗದ ಮಕ್ಕಳು ಸರ್ಕಾರ ಇನ್ನಾದ್ರೂ ಬಸ್ ವ್ಯವಸ್ಥೆ ಮಾಡಲಿ ಅಂತಾ ಮನವಿ ಮಾಡಿಕೊಳ್ತಿದ್ದಾರೆ. ಅದೆಷ್ಟೋ ಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲಾ? ಕಲಿಕೆಗಾಗಿ ಕಾಲ್ನಡಿಗೆಯಲ್ಲಿ ಬರುವ ಮಕ್ಕಳ ಸ್ಥಿತಿ ಹೇಗಿದೆ ಅಂತೀರಾ ಈ ಸ್ಟೋರಿ ನೋಡಿ...
2 / 7
ದಟ್ಟ ಅರಣ್ಯ ಪ್ರದೇಶ, ಭಯಂಕರ ಕಾಡಿನ ನಡುವೆ ಕೈ ಕೈ ಹಿಡಿದುಕೊಂಡು ಹೆಗಲಿಗೆ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಬರ್ತಿರುವ ವಿದ್ಯಾರ್ಥಿಗಳು ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಶ್ಚಿಮ ಘಟ್ಟ ಪ್ರದೇಶದ ಕಾಡಿನಲ್ಲಿ. ನೀಲಾವಡೆ ಅನ್ನೋ ಗ್ರಾಮದಲ್ಲಿ ಸರ್ಕಾರಿ ಮರಾಠಿ ಪ್ರೌಢ ಶಾಲೆ ಇದ್ದು ಈ ಶಾಲೆಗೆ ಸುತ್ತ ಮುತ್ತಲಿನ ಎಂಟಕ್ಕೂ ಅಧಿಕ ಗ್ರಾಮದ ಮಕ್ಕಳು ಬರ್ತಾರೆ.
3 / 7
ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲದ್ದರಿಂದ ನಿತ್ಯವೂ ನಡೆದುಕೊಂಡೇ ಶಾಲೆಗೆ ಬರ್ತಾರೆ ವಿದ್ಯಾರ್ಥಿಗಳು. ಹುಟ್ಟಿದಾಗಿನಿಂದಲೇ ಬಸ್ ಸಂಚಾರವೇ ಇಲ್ಲದ್ದರಿಂದ ಕಾಡಿನಲ್ಲಿ ನಡೆದುಕೊಂಡು ಮುಖ್ಯ ರಸ್ತೆಗೆ ಬಂದು ಖಾಸಗಿ ವಾಹನಗಳಲ್ಲಿ ಜನ ಓಡಾಡ್ತಾರೆ. ಆದ್ರೇ ವಿದ್ಯಾರ್ಥಿಗಳು ಮಾತ್ರ ನಡೆದುಕೊಂಡೇ ಶಾಲೆಗೆ ಬರುವುದು ಅನಿವಾರ್ಯವಾಗಿದೆ. ಎರಡು ಕಿಮೀ ಇಂದ ಹಿಡಿದು ಎಂಟು ಕಿಮೀ ವರೆಗೂ ಗ್ರಾಮಗಳಿದ್ದು ಅಲ್ಲಿಂದ ಕಾಡಿನಲ್ಲೇ ನಡೆದುಕೊಂಡು ಈ ಮಕ್ಕಳು ಓದಲು ಬರ್ತಾರೆ.
4 / 7
ಕಬ್ಬನಾಳಿ, ಕೊಂಕಣವಾಡ್, ಮುಗೊಡ, ಜೋಗಮಠ, ಅಂಬೋಳಿ, ಬಾಂದೇವಾಡಾ ಗ್ರಾಮದಿಂದ ಮಕ್ಕಳು ಈ ರೀತಿ ಕಾಡಿನಲ್ಲಿ ನಡೆದುಕೊಂಡು ಬರ್ತಾರೆ. ಹೀಗೆ ಬರುವ ಸಂದರ್ಭದಲ್ಲಿ ಆಗಾಗ್ಗೆ ಕಾಡು ಕೋಣ, ಕರಡಿ ಸೇರಿದಂತೆ ಹಲವು ಪ್ರಾಣಿಗಳು ಕೂಡ ಎದುರಾಗುತ್ತವೆ. ಹುಲಿ, ಚಿರತೆ, ಕಾಡೆಮ್ಮೆ ಸೇರಿದಂತೆ ಕ್ರೂರ ಪ್ರಾಣಿಗಳಿದ್ದು ಜೀವ ಭಯದಲ್ಲೇ ಮಕ್ಕಳು ಬರ್ತಾರೆ.
5 / 7
ಇನ್ನು ಮೂರು ತಿಂಗಳ ಕಾಲ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಕೂಡ ಆಗುತ್ತೆ. ಒಂದು ಕಡೆ ಮಳೆ, ಇನ್ನೊಂದು ಕಡೆ ಕ್ರೂರ ಪ್ರಾಣಿಗಳ ಭಯ -ಇದೆಲ್ಲದರ ನಡುವೆ ನಿತ್ಯವೂ ಕಿಮೀ ಗಟ್ಟಲೆ ಮಕ್ಕಳು ನಡೆದುಕೊಂಡು ಬಂದು ಓದುತ್ತಿದ್ದಾರೆ. ಖಾನಾಪುರ ತಾಲೂಕಿನಲ್ಲಿ 250 ಗ್ರಾಮಗಳ ಪೈಕಿ ಸುಮಾರು 50ಕ್ಕೂ ಅಧಿಕ ಗ್ರಾಮಗಳಿಗೆ ಬಸ್ ಸೌಕರ್ಯವೇ ಇಲ್ಲ. ಕಾಡಂಚಿನಲ್ಲಿ ಪ್ರೌಢ ಶಾಲೆಗಳಲ್ಲಿ ಈ ಬಾರಿ ಶೇಕಡಾ 85ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.
6 / 7
ಆದ್ರೇ ಪಾಸ್ ಆದ ವಿದ್ಯಾರ್ಥಿಗಳು ಮುಂದಿನ ಓದಿಗೆ ಖಾನಾಪುರಕ್ಕೆ ಹೋಗಬೇಕಾದ ಅನಿವಾರ್ಯತೆಯಿದ್ದು ಬಸ್, ರಸ್ತೆ ಇಲ್ಲದೇ ಓದು ಮೊಟಕುಗೊಳಿಸುತ್ತಾರೆ. ಕೆಲ ಭಾಗದಲ್ಲಿ ಬಸ್ ಇದ್ದರೂ ಮಕ್ಕಳಿಗೆ ಅದರ ಉಪಯೋಗ ಸಿಗುತ್ತಿಲ್ಲ. ಸಂಚಾರಕ್ಕೆ ಬಸ್ ಬಿಡಿ ಅಂತಾ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅರ್ಜಿ ನೀಡಿದ್ದೂ, ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಮಕ್ಕಳ ಕಲಿಕೆಗೆ ಅನುಕೂಲ ಆಗಲು ಬಸ್ ಸೇರಿ ಮೂಲಭೂತ ಸೌಕರ್ಯ ಒದಗಿಸುವಂತೆ ಶಿಕ್ಷಕರು ಮತ್ತು ಕಾಡಂಚಿನ ಗ್ರಾಮದ ಪೋಷಕರು ಸರ್ಕಾರಕ್ಕೆ ಮತ್ತು ಸಾರಿಗೆ ಇಲಾಖೆಗೆ ಮತ್ತೆ ಮತ್ತೆ ಮನವಿ ಮಾಡಿಕೊಳ್ತಿದ್ದಾರೆ.
7 / 7
ಒಟ್ಟಾರೆ ಕಾಡಂಚಿನಲ್ಲಿದ್ರೂ ಓದಿ ಎನಾದ್ರೂ ಸಾಧನೆ ಮಾಡಬೇಕು ಅಂತಾ ಸಾವಿರಾರು ವಿದ್ಯಾರ್ಥಿಗಳು ಜೀವ ಒತ್ತೆ ಇಟ್ಟು ಕಾಡಿನಲ್ಲಿ ನಡೆದುಕೊಂಡು ಬಂದು ಕಲಿಕೆ ಮುಂದುವರೆಸಿದ್ದಾರೆ. ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಿದ್ರೂ ಈ ವರೆಗೂ ಸ್ಪಂದಿಸುವ ಕೆಲಸ ಮಾಡಿಲ್ಲ, ಇನ್ನಾದ್ರೂ ಸಾರಿಗೆ ಇಲಾಖೆ ಮತ್ತು ಸರ್ಕಾರ ಎಚ್ಚೆತ್ತುಕೊಂಡು ಈ ಭಾಗದ ಗ್ರಾಮಗಳಿಗೆ ಶಾಲಾ ಸಮಯಕ್ಕೆ ಒಂದು ಬಸ್ ವ್ಯವಸ್ಥೆ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡುತ್ತಾ ಅನ್ನೋದನ್ನ ಕಾದುನೋಡಬೇಕಿದೆ...