
ಹೀಗೆ ದೇವರ ದರ್ಶನಕ್ಕೆ ಮುಗಿ ಬಿದ್ದಿದ್ದ ಭಕ್ತ ಸಮೂಹ, ವೀರಭದ್ರ ಶಕ್ತಿಗೆ ಹಿಡಿದ ಕೈಗನ್ನಡಿ. ಇದು ದಾವಣಗೆರೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದ ಶ್ರೀ ವೀರಭದ್ರೆಶ್ವರ ಸ್ವಾಮಿಯ ರಥೋತ್ಸವ. ಇಲ್ಲಿ ಪ್ರತಿ ವರ್ಷ ಭರತ ಹುಣ್ಣಿಮೆ ಬಳಿಕ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ.

ಇದು ರಾಜ್ಯದಲ್ಲಿ ನಡೆಯುವ ಅಪರೂಪದ ಭಕ್ತಿ ಸೇವೆ. ಈ ಜಾತ್ರೆಗೆ ತನ್ನದೆಯಾದ ಇತಿಹಾಸವಿದೆ. ಪುರಾಣದಲ್ಲಿ ಹೇಳಿದಂತೆ ದೇವಾನು ದೇವತೆಗಳ ಮೇಲೆ ದಕ್ಷ ಬ್ರಹ್ಮ ದಾಳಿ ನಡೆಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ದೇವರ ಅನುಗ್ರಹದಿಂದ ವೀರಭದ್ರ ಜನ್ಮತಾಳುತ್ತಾನೆ. ರಾಕ್ಷಸರ ಉಪಟಕ್ಕೆ ಇತಿಶ್ರೀ ಹಾಕುತ್ತಾನೆ.

ಇದೇ ಕಾರಣಕ್ಕೆ ವೀರಭದ್ರನ ಪೂಜೆ ಮತ್ತು ಪವಾಡ, ಭಕ್ತಿ ಸಮರ್ಪಣೆಯ ವಿಧಾನಗಳು ನಡೆದುಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ವೀರಭದ್ರನ ಸ್ಮರಣೆಗಾಗಿ ಮೆರವಣಿಗೆ ಮಾಡಲಾಗುತ್ತದೆ. ಈ ಮೂಲಕ ವೀರಭದ್ರ ಸ್ವಾಮಿಯನ್ನ ಭಕ್ತರು ಆರಾಧನೆ ಮಾಡುತ್ತಾರೆ. ಈ ಕಾರಣದಿಂದ ಇಲ್ಲಿ ಇಂದಿಗೂ ಅಸ್ತ್ರ ಸೇವೆ ಮಾಡಿಸಿಕೊಳ್ಳುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಲಾಗುತ್ತದೆ.

ಇದು ಬೇರೆಕಡೆ ಮಾಡುವ ಗುಗ್ಗಳಕ್ಕಿಂತ ವಿಭಿನ್ನವಾದ ಗುಗ್ಗಳ ಇಲ್ಲಿ ನಡೆಯುತ್ತದೆ. ಕೆಲವೆಡೆ ಮಣ್ಣಿನ ಮಡಿಕೆಗಳ ಗುಗ್ಗಳ ಮಾಡಲಾಗುತ್ತದೆ. ಆದ್ರೆ, ಆವರಗೊಳ್ಳದಲ್ಲಿ ಮಾತ್ರ ಭತ್ತದ ಹುಲ್ಲಿನ ಶರವೇ ಮೂಲಕ ಗುಗ್ಗಳ ಮಾಡಲಾಗುತ್ತದೆ. ಈ ನಡುವೆ ಶಸ್ತ್ರ ಎಂಬ ಕಾರ್ಯವನ್ನೂ ನೆರವೇರಿಸಲಾಗುತ್ತದೆ.ಭಕ್ತರು ಪುರೋಹಿತರಿಂದ ಬಾಯಿಗೆ ಇತ್ತಾಳೆ ತಂತಿ ಹಾಕಿಸಿಕೊಳ್ಳುತ್ತಾರೆ. ಈ ವೇಳೆ ಯಾವುದೇ ನೋವು ಆಗುವುದಿಲ್ಲ. ಈ ರೀತಿ ಮಾಡುವುದರಿಂದ ಭಕ್ತರ ಸಂಕಷ್ಟ ದೂರವಾಗುತ್ತದೆ ಎನ್ನುತ್ತಾರೆ ಪುರೋಹಿತರು.

ಇದು ಆ ವೀರಭದ್ರೇಶ್ವರ ಸ್ವಾಮಿಯ ಪವಾಡ ಎಂಬುದು ಭಕ್ತರ ನಂಬಿಕೆ. ಈ ರೀತಿ ಹರಕೆ ತೀರಿಸುವುದರಿಂದ ನಮ್ಮ ಕಷ್ಟ ದೂರವಾಗುತ್ತದೆ, ಪಾಪ ಕರ್ಮ ತೊಳೆದು ಪುಣ್ಯ ಬರುತ್ತದೆ ಎನ್ನುತ್ತಾರೆ ಭಕ್ತರು. ಈ ಮೂಲಕ ಭಕ್ತಿಪರಾಕಷ್ಟೆ ಮೆರೆದು ಭಕ್ತರು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಜಿಲ್ಲೆಯ ಬಹುತೇಕ ಕಡೆಯಿಂದ ಇಲ್ಲಿಗೆ ಭಕ್ತರುಬರುತ್ತಾರೆ. ಹೆಚ್ಚಾಗಿ ಜಂಗಮರಲ್ಲಿ ವೀರ ಮಹೇಶ್ವರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.