ಮೈಸೂರು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನ ಹುಂಡಿ ಶಾಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಗ ಯತಿಂದ್ರ ಸಿದ್ದರಾಮಯ್ಯ ಅವರು ತೆರಳಿ ಮತದಾನ ಚಲಾಯಿಸಿದರು. ಇನ್ನು ಈ ಗ್ರಾಮ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ರಾಮನಗರ ತಾಲೂಕಿನ ಬಿಡದಿ ಬಳಿಯಿರುವ ಕೇತಗಾನಹಳ್ಳಿಯ ಮತಗಟ್ಟೆಗೆ ಪತ್ನಿ, ಮಗ-ಸೊಸೆಯೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಜೊತೆಗೆ ಈ ಬಾರಿ ರಾಜ್ಯದಲ್ಲಿ ಅತೀ ಮಂಡ್ಯದಿಂದ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿಕೆ ಸುರೇಶ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕುಟುಂಬ ಸಮೇತ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಮೈಸೂರಿನ ವಿಜಯನಗರದ ಮತಗಟ್ಟೆ ಸಂಖ್ಯೆ 106 ರಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ ಚಲಾಯಿಸಿದರು. ಈ ವೇಳೆ ಮಾತನಾಡಿ, ‘ ಶಿವಮೊಗ್ಗ ಹೊರತುಪಡಿಸಿ ಹಳೆ ಮೈಸೂರು ಪ್ರಾಂತ್ಯದ ಎಲ್ಲಾ ಕಡೆ ಚುನಾವಣೆ ನಡೆಯುತ್ತಿದೆ. ಜೆ.ಡಿ.ಎಸ್, ಬಿಜೆಪಿ ಮೈತ್ರಿಯಾಗಿರುವುದರಿಂದ ಎಲ್ಲಾ ಸ್ಥಾನಗಳಲ್ಲು ಗೆಲ್ಲುತ್ತೇವೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಗಿರಿನಗರದ ವಿಜಯ ಭಾರತಿ ಸ್ಕೂಲ್ನಲ್ಲಿ ಮತ ಚಲಾಯಿಸಿದರು. ಇದೇ ವೇಳೆ ಶಾಸಕ ರವಿಸುಬ್ರಮಣ್ಯ ಕೂಡ ಮತದಾನ ಮಾಡಿದರು.
ಇಂದು ಲೋಕಸಭಾ ಚುನಾವಣೆ ಹಿನ್ನೆಲೆ ಪತ್ನಿಯೊಂದಿಗೆ ಬಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಮತ ಚಲಾಯಿಸಿದರು. ಸ್ವಗ್ರಾಮ ಜೆಸಿ ಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದ ಮಾಧುಸ್ವಾಮಿ, ‘ದೇಶದ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರು ಮತ ಚಲಾಯಿಸಬೇಕು. ದೇಶದ ಆಡಳಿತ ಚುಕ್ಕಾಣಿಯನ್ನ ಯಾರು ಹಿಡಿಯಬೇಕು ಎನ್ನುವುದನ್ನ ಆರಿಸೋದಕ್ಕೆ ಇದೊಂದೇ ಮಾರ್ಗ ಎಂದರು.