ಮಡಿಕೇರಿ: ಮಗನನ್ನು ವಧುವಿನಂತೆ, ಮಗಳನ್ನು ವರನಂತೆ ಶೃಂಗರಿಸಿ ಮೆರೆವಣಿಗೆ, ಏನಿದು ವಿಶಿಷ್ಟ ಆಚರಣೆ; ಇಲ್ಲಿದೆ ನೋಡಿ
ಹಬ್ಬ ಹರಿದಿನಗಳ ಉತ್ಸವಗಳ ಸಂದರ್ಭ ಬಂದಾಗ ಕೊಡಗು ಜಿಲ್ಲೆ ಬಹಳ ವಿಶೇಷ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕಂದರೆ ಈ ಜಿಲ್ಲೆಯಲ್ಲಿ ನಡೆಯುವ ವೈವಿಧ್ಯಮಯ ಉತ್ಸವಗಳ ವೈಭವವೇ ಅಂತಹದ್ದು. ಗಂಡನ್ನು ಮಧುಮಗಳಂತೆಯೂ, ಹೆಣ್ಣನ್ನು ಮಧು ಮಗನಂತೆಯೂ ಶೃಂಗರಿಸಿ ಹರಕೆ ತೀರಿಸುವ ಬಗೆಯೇ ವಿಶಿಷ್ಟವಾದ ಆಚರಣೆಯೊಂದು ನಡೆದಿದೆ. ಏನಿದು ಅಂತೀರಾ ಇಲ್ಲಿದೆ ನೋಡಿ.
1 / 7
ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ಸಾಲು, ಅದರ ಮಧ್ಯೆ ವಿರಾಜಮಾನವಾಗಿರುವ ದೇವರ ಗುಡಿ. ಆ ದೇವರ ಗುಡಿಯ ಸುತ್ತಲೂ ಜಿಂಕೆಯ ಕೊಂಬು ಮತ್ತು ಪ್ರಾಣಿಗಳ ದುಪ್ಪಟ್ಟ ಹಿಡಿದು ಲಯಬದ್ಧವಾದ ಚಂಡೆಗೆ ಕುಣಿಯುತ್ತಿರುವ ಭಕ್ತವೃಂದ. ಇದು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಇಬ್ಬನಿವಲವಾಡಿ ಗ್ರಾಮದ ಭದ್ರಕಾಳಿ ದೇವರ ಉತ್ಸವದಲ್ಲಿ ಕಂಡುಬಂದ ದೃಶ್ಯಗಳು.
2 / 7
ಇಲ್ಲಿ ಪ್ರತಿವರ್ಷ ಮಾರ್ಚ್ ತಿಂಗಳ ನಾಲ್ಕನೇ ವಾರದಲ್ಲಿ ಭದ್ರಕಾಳಿ ಉತ್ಸವ ನೆರವೇರುತ್ತದೆ. ಈ ಸಂದರ್ಭ ಊರಿನ ಮಂದಿ ವಿಶಿಷ್ಟವಾದ ಹರಕೆಯೊಂದನ್ನು ಕಟ್ಟಿಕೊಳ್ಳುತ್ತಾರೆ. ತಮ್ಮ ಬೇಡಿಕೆ ಈಡೇರಿದರೆ
ತಮ್ಮ ಮಗನನ್ನು ಮಧುಮಗಳಂತಯೇ ಮಗಳನ್ನು ಮಧುಮಗನಂತೆ ಶೃಂಗರಿಸಿ ದೇವಸ್ಥಾನದ ಮೂರು ಸುತ್ತು ಒಡ್ಡೋಲಗ ಸಮೇತ ಮೆರವಣಿಗೆ ಮಾಡುವುದಾಗಿ ಬೇಡಿಕೊಂಡಿರುತ್ತಾರೆ.
3 / 7
ಅದರಂತೆ ಬೇಡಿಕೆ ಈಡೇರಿದರೆ ಹಬ್ಬದ ದಿನವೇ ಈ ಹರಕೆಯನ್ನ ತೀರಿಸುತ್ತಾರೆ. ಇದಕ್ಕೆ ಆಂಗೋಲ ಪೋಂಗೋಲ ಎಂದು ಕರೆಯಲಾಗುತ್ತದೆ. ಜನರು ಎಷ್ಟೇ ಮಾಡರ್ನ್ ಆದರೂ ಇಂದೀಗೂ ಈ ಸಾಂಪ್ರದಾಯಿಕ ಆಚರಣೆಗಳನ್ನ ಬಿಟ್ಟಿಲ್ಲ ಎನ್ನುವುದು ವಿಶೇಷ.
4 / 7
ಇನ್ನು ಈ ಊರ ಹಬ್ಬದಲ್ಲಿ ಮೂರು ಬಗೆಯ ಸಾಂಪ್ರದಾಯಿಕ ನೃತ್ಯಗಳನ್ನ ಮಾಡಲಾಗುತ್ತದೆ. ಬಿಳಿಯ ಕುಪ್ಪಸ ಧರಿಸಿದ ಊರಿನ ಪುರುಷರು ಕೈಯಲ್ಲಿ ನವಿಲು ಗರಿಯ ಗೊಂಚಲು ಹಿಡಿದು ಚಂಡೆ ನಾದಕ್ಕೆ 12 ಬಗೆಯ ನೃತ್ಯ ಮಾಡುತ್ತಾರೆ. ವಿಶಾಲ ಬಯಲಿನಲ್ಲಿ ಬೆಟ್ಟಗುಡ್ಡಗಳ ಮಧ್ಯೆ ಮಾಡೋ ಈ ನೃತ್ತ ವೀಕ್ಷಿಸುವುದೇ ಒಂದು ಆನಂದ. ಇದನ್ನು ಪೀಲಿಯಾಟ್ ಎಂದು ಕರೆಯಲಾಗುತ್ತದೆ.
5 / 7
ಶ್ರೀ ವಿಷ್ಣು ಭಸ್ಮಾಸುರನನ್ನು ವಧಿಸಿದ ಕಥಾ ರೂಪಕವನ್ನು ಇಲ್ಲಿ ನೃತ್ಯದ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಇದಾದ ಬಳಿಕ ದೇವರ ಗುಡಿಯ ಸುತ್ತ ಕೈಯಲ್ಲಿ ಜಿಂಕೆಯ ಕೊಂಬನ್ನು ಹಿಡಿದು ಕೊಂಬಾಟ್ ಮಾಡುವ ದೃಷ್ಯವೂ ಭಕ್ತರ ಪರಾಕಾಷ್ಠತೆಗೆ ಸಾಕ್ಷಿಯಾಗುತ್ತದೆ.
6 / 7
ಇದಾದ ಬಳಿಕ ಪ್ರಾಣಿಯ ದುಪ್ಪಟ್ಟ ಹಿಡಿದು ಚೌರಿಯಾಟ್ ಎಂಬ ಮತ್ತೊಂದು ಬಗೆಯ ನೃತ್ಯ ಮಾಡುತ್ತಾರೆ. ಈ ಆಚರಣೆಗಳನ್ನ ನೋಡಲು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
7 / 7
ತಮ್ಮೂರಿನ ಭದ್ರಕಾಳಿ ದೇವರು ಕೇಳಿದ್ದನ್ನು ಅನುಗ್ರಹಿಸುವ ಮಹಾಮಾತೆ ಎಂದು ಇಲ್ಲಿನ ಭಕ್ತರು ನಂಬುತ್ತಾರೆ. ಹಾಗಾಗಿ ಈ ದಿನ ಊರಿನ ಮಂದಿಯೆಲ್ಲ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಇಲ್ಲಿ ಬಂದು ಸೇರುತ್ತಾರೆ. ಈ ಮೂಲಕ ಕೊಡಗಿನ ವಿಶಿಷ್ಟ ಹಬ್ಬದ ಪರಂಪರೆಯೊಂದು ಇಲ್ಲಿ ಅನಾವರಣಗೊಳ್ಳುತ್ತದೆ.