ರಾತ್ರಿ ಚೆನ್ನಾಗಿ ನಿದ್ರೆ ಬರದಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರಲು ಸಾಧ್ಯವಿಲ್ಲ. ಏಕೆಂದರೆ ನಿದ್ರೆಯ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಸಿಗದಿರುವುದಕ್ಕೆ ಹಲವು ಕಾರಣಗಳಿರಬಹುದು ಆದರೆ ನಿದ್ರೆ ಬರಲು ಮಾತ್ರೆಯ ಮೊರೆ ಹೋಗುವ ಬದಲು, ಇಂತಹ ಸಮಸ್ಯೆಗಳನ್ನು ನೈಸರ್ಗಿಕವಾಗಿ ಸರಿಪಡಿಸುವ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಆಹಾರದಲ್ಲಿ ಮೆಗ್ನೀಸಿಯಮ್ ಭರಿತ ಆಹಾರಗಳನ್ನು ಸೇರಿಸುವುದರಿಂದ ಉತ್ತಮ ನಿದ್ರೆ ಮಾಡಲು ಅನುವುಮಾಡಿಕೊಡುತ್ತದೆ. ಹಾಗಾಗಿ ಚೆನ್ನಾಗಿ ನಿದ್ರೆ ಮಾಡಲು ಮೆಗ್ನೀಸಿಯಮ್ ಇರುವ ಆಹಾರಗಳ ಸೇವನೆ ಮಾಡಬೇಕಾಗುತ್ತದೆ.
ಬೀನ್ಸ್ ನಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ನಿದ್ರೆ ಬರುವುದಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಪಾಲಕ್ ಸೊಪ್ಪು ಕೂಡ ದೇಹಕ್ಕೆ ವಿಶ್ರಾಂತಿ ನೀಡುವುದಲ್ಲದೆ ವ್ಯಕ್ತಿಗೆ ರಾತ್ರಿ ಚೆನ್ನಾಗಿ ನಿದ್ರೆ ಬರುವುದಕ್ಕೆ ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ರಾತ್ರಿ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಬಾಳೆಹಣ್ಣುಗಳು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದ್ದು ಆತಂಕವನ್ನು ಕಡಿಮೆ ಮಾಡಲು ಮತ್ತು ರಾತ್ರಿ ಒಳ್ಳೆಯ ನಿದ್ರೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ರಾತ್ರಿ ಮಲಗುವ ಮೊದಲು ಬಾಳೆಹಣ್ಣನ್ನು ತಿನ್ನಿ.
ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಅಂಶವಿದೆ. ಇದು ಮೆಲಟೋನಿನ್ ಉತ್ಪಾದನೆಯನ್ನು ಉತ್ತೇಜಿಸುವುದರ ಜೊತೆಗೆ ರಾತ್ರಿ ನಿದ್ರೆ ಮಾಡಲು ಅಗತ್ಯವಾಗಿದೆ. ಡಾರ್ಕ್ ಚಾಕೊಲೇಟ್ ತಿನ್ನುವುದು ದೇಹಕ್ಕೆ ಅಗತ್ಯವಿರುವ ಮೆಗ್ನೀಸಿಯಮ್ ಪಡೆಯಲು ಸಹ ಪ್ರಯೋಜನಕಾರಿಯಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.