Kannada News Photo gallery Varli paintings on the wall by Raichur district administration to increase voter turnout
ಮತದಾನದ ಪ್ರಮಾಣ ಹೆಚ್ಚಿಸಲು ರಾಯಚೂರು ಜಿಲ್ಲಾಡಳಿತದಿಂದ ಮೆಗಾ ಪ್ಲಾನ್: ಮತಗಟ್ಟೆಗಳ ಗೋಡೆಯ ಮೇಲೆ ವರ್ಲಿ ಚಿತ್ರಗಳ ಮೆರಗು, ಇಲ್ಲಿದೆ ನೋಡಿ ಝಲಕ್
ಅಲ್ಲಿ ಕಡುಬಡತನ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಆ ಜಿಲ್ಲೆಯಲ್ಲಿ ಗೂಳೆ ಹೋಗುವ ಜನರೇ ಹೆಚ್ಚು. ಹೀಗಾಗಿ ಚುನಾವಣೆ ಹಿನ್ನೆಲೆ ಅದೇ ಗಡಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸರ್ಕಾರಿ ಶಾಲೆಗಳಲ್ಲಿ ವರ್ಲಿ ಚಿತ್ರಣ ಮಾಡುವ ಮೂಲಕ ಚುನಾವಣೆ ಹಕ್ಕು, ಅದರ ಮೌಲ್ಯಗಳನ್ನ ಸಾರುತ್ತಿದೆ.
ವರ್ಲಿ ಚಿತ್ರಗಳ ಮತದಾರರನ್ನು ಸೆಳೆಯಲು ಜಿಲ್ಲಾಡಳಿತ ಪ್ಲ್ಯಾನ್
ರಾಯಚೂರು ಜಿಲ್ಲೆಯಲ್ಲಿ ಅಸೆಂಬ್ಲಿ ಎಲೆಕ್ಷನ್ ಕಾವು ನಿಧಾನಕ್ಕೆ ರಂಗೇರುತ್ತಿದೆ. ಮತದಾನ ಪ್ರಭುವಿನ ಬರುವಿಕೆಗೆ ಮತಗಟ್ಟೆಗಳು ಭರ್ಜರಿಯಾಗಿ ಸಿಂಗಾರಗೊಳುತ್ತಿವೆ. ಅದರಲ್ಲೂ ಸಹ್ಯಾದ್ರಿ ಶ್ರೇಣಿಯ ಉತ್ತರ ಬುಡಕಟ್ಟು ಕಲೆಯ ಒಂದು ರೂಪವಾದ ವರ್ಲಿ ಜಾನಪದ ವರ್ಣಚಿತ್ರಗಳಿಂದ ಮತಗಟ್ಟೆಗಳನ್ನ ಅಲಂಕಾರ ಮಾಡಲಾಗುತ್ತಿದೆ.
ಹೀಗೆ ಸುಣ್ಣ ಮತ್ತು ಸಣ್ಣ ಕಡ್ಡಿ ಬಳಕೆಯಿಂದ ಚಿತ್ರ ಬಿಡಿಸುತ್ತಿರುವ ಕಲಾವಿದರು. ಸರಳವಾದ ಚಿತ್ರವಾದರೂ ಅಮೋಘ ಸಂದೇಶ ಸಾರುತ್ತಿರುವ ವರ್ಲಿ ಚಿತ್ರಗಳು. ಹೀಗೆ ಕಂಗೊಳಿಸುತ್ತಿರುವ ಈ ಎಲ್ಲಾ ಬಣ್ಣ ಬಣ್ಣದ ಚಿತ್ರಗಳು ಕಂಡುಬಂದಿದ್ದು ಚುನಾವಣೆ ನಿಮಿತ್ತ ಸಿದ್ದಗೊಂಡ ಮತಗಟ್ಟೆಗಳ ಗೋಡೆಯ ಮೇಲೆ.
ಪ್ರತಿ ಬಾರಿಯ ಚುನಾವಣೆ ಸಮಯದಲ್ಲಿ ಬೇಸಿಗೆ ತಾಪಮಾನ, ಜನರ ವಲಸೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಕೊರತೆ ಸೇರಿದಂತೆ ನಾನ ಕಾರಣಗಳಿಂದ ಜಿಲ್ಲೆಯಲ್ಲಿ ಮತದಾನ ಕುಂಠಿತವಾಗುತ್ತಿತ್ತು. ಈ ಹಿನ್ನೆಲೆ ಆಕರ್ಷಕ & ಗ್ರಾಮೀಣ ಜೀವನ ಶೈಲಿಗೆ ಹತ್ತಿರವಾಗಿರುವ ಕಲಾ ಪ್ರಕಾರಗಳಲ್ಲಿ ಒಂದಾದ ವಾರ್ಲಿ ಚಿತ್ರ ಕಲೆ ಮೂಲಕ ಗ್ರಾಮೀಣ ಭಾಗದಲ್ಲಿ ಮತದಾರರನ್ನ ಸೆಳೆಯಲು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಶಶಿಧರ್ ಕುರೇರ ಸೇರಿ ಈ ಪ್ಲ್ಯಾನ್ ಮಾಡಿದ್ದಾರೆ.
ಈಗಾಗಲೇ 100 ಮತಗಟ್ಟೆಗಳಲ್ಲಿ ವರ್ಲಿ ಚಿತ್ರಕಲೆಯನ್ನ ಬಿಡಿಸಲಾಗಿದೆ. ಯಾವುದೇ ಪಕ್ಷ ಅಥವಾ ಯಾವುದೇ ಅಭ್ಯರ್ಥಿಗಳ ಚಿಹ್ನೆಗಳನ್ನ ಬಳಸದೇ, ಕೇವಲ ನಿಸರ್ಗಗಳಲ್ಲಿರುವ ಪಕ್ಷಿಗಳ ಚಿತ್ರಗಳು ಸೇರಿದಂತೆ ವಿವಿಧ ಕಲಾಕೃತಿಗಳನ್ನ ಮತಗಟ್ಟೆಗಳ ಗೋಡೆಗೆ ಅಲಂಕಾರ ಮಾಡಲಾಗುತ್ತಿದೆ.
ಹೌದು ರಾಯಚೂರು ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವರ್ಲಿ ಚಿತ್ರಗಳನ್ನ ಬಿಡಿಸಲಾಗುತ್ತಿದೆ. ಶಾಲೆಯ ಚಿತ್ರಕಲಾ ಶಿಕ್ಷಕರು ಮತ್ತು ಹೊರ ಮೂಲದ ಕಲಾವಿದರನ್ನ ವರ್ಲಿ ಆರ್ಟ್ ಬಿಡಿಸಲು ನೇಮಕ ಮಾಡಲಾಗಿದೆ.
ಇನ್ನು ಇದಕ್ಕಾಗಿ ಪ್ರತ್ಯೇಕವಾಗಿ ಕಲಾವಿದರ ತಂಡಗಳನ್ನ ಕೂಡ ರಚನೆ ಮಾಡಲಾಗಿದ್ದು, ಈಗಾಗಲೇ 120 ಕ್ಕೂ ಹೆಚ್ಚು ಶಾಲೆಗಳ ಗೋಡೆಗೆ ವರ್ಲಿ ಚಿತ್ರ ಬಿಡಿಸುವ ಕಾರ್ಯ ಕಂಪ್ಲೀಟ್ ಆಗಿದೆ. ಇದರ ಜೊತೆಗೆ ಮತದಾರರಿಗೆ ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಿಲ್ಲಾಡಳಿತ ಸ್ವಯಂ ಪ್ರೇರಿತವಾಗಿ ಕೆಲವೊಂದಿಷ್ಟು ಸ್ಲೋಗನ್ ರಚನೆ ಮಾಡಿದೆ.”ನನ್ನ ಮತನನ್ನ ಹಕ್ಕು”,”ನಾನು ನೈತಿಕ ಮತ ದಾನ ಬೆಂಬಲಿಸುವೆ” ಎಂಬ ಸ್ಲೋಗನ್ ರಚನೆ ಮಾಡಲಾಗಿದೆ.
ಸಾಂಪ್ರದಾಯಿಕ ಕಲೆಯಾದ ವರ್ಲಿ ಚಿತ್ರಕಲೆಯಿಂದ ಶಾಲೆಗಳು ಆಕರ್ಷಣೆಯ ಕೇಂದ್ರಗಳಾಗಿ ಬದಲಾಗಿವೆ. ಇದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವ ವಿಶ್ವಾಸವನ್ನ ಜಿಲ್ಲಾಡಳಿತ ಹೊಂದಿದೆ.
ಒಟ್ಟಿನಲ್ಲಿ ರಾಯಚೂರು ಜಿಲ್ಲಾಡಳಿತ ಮತದಾರರನ್ನ ಮತಗಟ್ಟೆಗೆ ಸೆಳೆಯಲು ವಿಭಿನ್ನ ಪ್ರಯತ್ನವಂತೂ ಮಾಡಿದೆ. ಆದರೆ ಮತದಾರ ಪ್ರಭುಗಳು ಮಾತ್ರ ಈ ಪ್ರಯತ್ನಕ್ಕೆ ಎಷ್ಟರಮಟ್ಟಿಗೆ ಕೈ ಜೋಡಿಸುತ್ತಾರೆ ಕಾದು ನೋಡಬೇಕಿದೆ.