
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ವೈರಮುಡಿ ಬ್ರಹ್ಮೋತ್ಸವ ಶ್ರದ್ಧಾ ಭಕ್ತಿಯಿಂದ ಅದ್ದೂರಿಯಾಗಿ ಜರುಗಿತು. ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯದ ಭಕ್ತರು ಚೆಲುವ ನಾರಾಯಣಸ್ವಾಮಿಯ ವೈರಮುಡಿ ಉತ್ಸವವನ್ನು ಕಣ್ತುಂಬಿ ಕೊಂಡ್ರು.

ಮಾರ್ಚ್.21ರ ಬೆಳಗ್ಗೆ 7.30ರ ಸುಮಾರಿಗೆ ಮಂಡ್ಯ ಜಿಲ್ಲಾ ಖಜಾನೆಯಿಂದ ರತ್ನಖಚಿತ ಕಿರಿಟವನ್ನ ಹೊರತೆಗೆದು, ಜಿಲ್ಲಾಡಳಿತದ ವತಿಯಿಂದ ಪೂಜೆ ಸಲ್ಲಿಸಲಾಯಿತಿ. ನಂತರ ಹೊರಟ ವೈರಮುಡಿ ಸಂಪ್ರದಾಯದಂತೆ ಮಂಡ್ಯದ ಶ್ರೀಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯದಲ್ಲಿ ಪ್ರಥಮ ಪೂಜೆ ಸಲ್ಲಿಸಿ, ನಂತರ ಪಾಂಡವಪುರ ಮಾರ್ಗವಾಗಿ ಸಂಜೆ 6 ಗಂಟೆಗೆ ಮೇಲುಕೋಟೆಗೆ ತರಲಾಯ್ತು.

ಅಲ್ಲಿಂದ ಬೆಳ್ಳಿ ಪಲ್ಲಕ್ಕಿಯ ಮೂಲಕ ಎರಡೂ ಮುಡಿಗಳನ್ನು ಭವ್ಯ ಸ್ವಾಗತದೊಂದಿಗೆ ದೇವಸ್ಥಾನಕ್ಕೆ ತರಲಾಯ್ತು. ನಂತರ ದೇವಾಲಯದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ್ ದೇವಾಲಯದ ನಾಲ್ಕು ಸ್ಥಾನೀಕರುಗಳು ಸೇರಿದಂತೆ ಅರ್ಚಕರ ಸಮ್ಮುಖದಲ್ಲಿ ವಜ್ರಾಭರಣಗಳನ್ನು ಪರಿಶೀಲನೆ(ಪರ್ಕಾವಣೆ) ಮಾಡಲಾಯ್ತು.

ನಂತರ ವಜ್ರ ಖಚಿತ ಕಿರೀಟವನ್ನ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ಧಾರಣೆ ಮಾಡಿ ದೇವಸ್ಥಾನದಿಂದ ಹೊರಗೆ ತಂದು ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವೈರಮುಡಿ ಉತ್ಸವವನ್ನ ಆಚರಿಸಲಾಯ್ತು.

ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನು ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಕುಟುಂಬ ಸಮೇತರಾಗಿ ಪಾಲ್ಗೊಂಡು, 5.45 ಕೆಜಿ ಬೆಳ್ಳಿಯಿಂದ ತಯಾರಿಸಿದ ಸಂಪೂರ್ಣ ಚಿನ್ನ ಲೇಪಿತ ಸಾರ್ವಭೌಮ ಛತ್ರವನ್ನ ವಿಧಿವಿಧಾನದ ಮೂಲಕ ಪೂಜೆ ನೆರವೇರಿಸಿ ದಾನ ಮಾಡಿದ್ರು.

ಅಂದಹಾಗೆ ಮೇಲುಕೊಟೆ ದೇವಸ್ಥಾನ ರಾಜ್ಯದಲ್ಲಿಯೇ ಪುರಾಣ ಪ್ರಸಿದ್ದ ದೇವಸ್ಥಾನ. ಕಳೆದ ನೂರಾರು ವರ್ಷಗಳಿಂದ ವೈರಮುಡಿ ಉತ್ಸವವನ್ನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇನ್ನು ವೈರಮುಡಿ ಪರ್ಕಾವಣೆಯ ನಂತರ ಪ್ರತೀ ವರ್ಷದಂತೆ ಈ ವರ್ಷವೂ ಸಹ ಪುಷ್ಯನಕ್ಷತ್ರ ಶುಭ ಲಗ್ನದಲ್ಲಿ ಚೆಲುವನಾರಾಯಣಸ್ವಾಮಿಗೆ ವಜ್ರ ಖಚಿತ ವೈರಮುಡಿ ಕಿರೀಟವನ್ನು ಶಾಸ್ತ್ರೋಕ್ತವಾಗಿ ಧಾರಣೆ ಮಾಡಿದ ನಂತರ ಮಹಾ ಮಂಗಳಾರತಿ ಮಾಡಿ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯ್ತು.

ವಜ್ರ ಖಚಿತ ವೈರಮುಡಿ ಕಿರೀಟ ಧರಿಸಿ ಕಂಗೊಳಿಸುತ್ತಿದ್ದ ಚಲುವನಾರಾಯಣ ಸ್ವಾಮಿಯ ಉತ್ಸವ ಮೂರ್ತಿ ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಉತ್ಸವ ಮೂರ್ತಿಯನ್ನ ಕಂಡು ಪುಳಕಿತರಾದ್ರು. ಈ ಸಂದರ್ಭದಲ್ಲಿ ಗೋವಿಂದ ಗೋವಿಂದ ನಾಮ ಸ್ಮರಣೆ ಮುಗಿಲು ಮುಟ್ಟಿತ್ತು. ಇನ್ನು ಭಕ್ತರು ಕೂಡ ಹರ್ಷ ವ್ಯಕ್ತಪಡಿಸಿದ್ರು.

ಒಟ್ಟಾರೆ ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ವೈರಮುಡಿ ಉತ್ಸವ ಸಾಕಷ್ಟು ಅದ್ದೂರಿಯಾಗಿ ನೆರವೇರಿತು. ಇನ್ನು ಬೆಳಗ್ಗೆ ವಜ್ರದ ಕಿರಿಟಕ್ಕೆ ಪೂಜೆ ಸಲ್ಲಿಸಿ ಜಿಲ್ಲಾ ಖಜಾನೆ ವಾಪಾಸ್ ಇಡಲಾಗುತ್ತದೆ.