
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರ ವಿನಂತಿಯಂತೆ ಹೂ. ಹಾರತುರಾಯಿ ಬದಲಿಗೆ ಜನರು ವಿವಿಧ ಪುಸ್ತಕಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಪುಷ್ಪಗುಚ್ಛಗಳು, ಹೂಮಾಲೆಗಳು ಮತ್ತು ಶಾಲುಗಳಂತಹ ಸಾಂಪ್ರದಾಯಿಕ ಶುಭಾಶಯಗಳನ್ನು ಸ್ವೀಕರಿಸುತ್ತಿಲ್ಲಾ. ಬದಲಾಗಿ, ಗ್ರಾಮೀಣ ಗ್ರಂಥಾಲಯಗಳಿಗೆ ದೇಣಿಗೆಗಾಗಿ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ನೀಡುವಂತೆ ಪ್ರಿಯಾಂಕ್ ಖರ್ಗೆ ಅವರು ಜನರಿಗೆ ವಿನಂತಿಸಿದ್ದರು.

ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಲು ಬಂದ ಜನರು ಹೂ, ಹಾರ, ತುರಾಯಿ, ಶಾಲು ಬದಲಿಗೆ ಪುಸ್ತಕಗಳನ್ನು ನೀಡಿದ್ದಾರೆ.

ಜನರು ತಂದು ಕೊಟ್ಟಿರುವ ಒಂದೊಂದೇ ಪುಸ್ತಕಗಳನ್ನು ಪ್ರಿಯಾಂಕ್ ಖರ್ಗೆ ಅವರು ಒಂದೆಡೆ ಶೇಖರಣೆ ಮಾಡಿದ್ದು, ಇದೀಗ ಕಳೆದ ಆರು ತಿಂಗಳಲ್ಲಿ ಬಂದ ಎಲ್ಲಾ ಬುಕ್ಗಳನ್ನು ಒಂದೆಡೆ ಜೋಡಿಸಿಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಪುಸ್ತಕಗಳನ್ನು ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ಓದಲು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ.


ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಪುಸ್ತಕ ಪ್ರೀತಿ ಅಭಿನಂದನಾರ್ಹವಾದುದು. ಇದೊಂದು ಮಾದರಿ ನಡೆ. ಹಿಂದಿನ ಸರ್ಕಾರದಲ್ಲಿ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ವಿ.ಸುನೀಲಕುಮಾರ ಅವರೂ, ಈ ರೀತಿಯಲ್ಲಿ ಹಾರ ತುರಾಯಿ ಬದಲಿಗೆ ಪುಸ್ತಕಗಳನ್ನು ಸ್ವೀಕರಿಸಿದ್ದರು. ಪುಸ್ತಕಗಳಷ್ಟು ಅತ್ಯುತ್ತಮ ಕಾಣಿಕೆ ಬೇರೆ ಇರಲಾರದು.