
ಲೌವ್ರೆ ಪಿರಮಿಡ್, ಫ್ರಾನ್ಸ್: ನೀವು ಪ್ಯಾರಿಸ್‌ಗೆ ಪ್ರವಾಸಕೈಗೊಳ್ಳುವ ಯೋಚನೆಯಲ್ಲಿದ್ದರೆ, ನೀವು ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳಲ್ಲಿ ಇದು ಒಂದಾಗಿದೆ. ಚೈನೀಸ್-ಅಮೇರಿಕನ್ ವಾಸ್ತುಶಿಲ್ಪಿ ಐ ಎಂ ಪೈ ವಿನ್ಯಾಸಗೊಳಿಸಿರುವ ಈ ಪಿರಮಿಡ್ ಇಲ್ಲಿನ ವಾಸ್ತುಶಿಲ್ಪಗಳಿಂದಲೇ ನಿಮ್ಮನ್ನು ಬೆರಗುಗೊಳಿಸುತ್ತದೆ. ಇದು ಸಂಪೂರ್ಣವಾಗಿ ಗಾಜು ಮತ್ತು ಲೋಹದಿಂದ ನಿರ್ಮಿಸಲಾಗಿದೆ. ಈ ದೊಡ್ಡ ಪಿರಮಿಡ್ ಸುತ್ತಲೂ ಮೂರು ಚಿಕ್ಕ ಪಿರಮಿಡ್‌ಗಳಿವೆ.

ಟರ್ಕಿಯ ಹಗಿಯಾ ಸೋಫಿಯಾ ಮತ್ತು ಪಕ್ಕದ ನೀಲಿ ಮಸೀದಿ ನೀವು ಇಸ್ತಾನ್‌ಬುಲ್‌ನಲ್ಲಿದ್ದರೆ ನೋಡಬೇಕಾದ ತಾಣವಾಗಿದೆ. ಇಸ್ತಾನ್‌ಬುಲ್‌ನಲ್ಲಿರುವ ಬ್ಲೂ ಮಸೀದಿ, ಅದರ ಅಧಿಕೃತ ಹೆಸರು, ಸುಲ್ತಾನ್ ಅಹ್ಮದ್ ಮಸೀದಿ ಎಂದೂ ಕರೆಯಲ್ಪಡುತ್ತದೆ, ಇದು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಒಟ್ಟೋಮನ್-ಯುಗದ ಐತಿಹಾಸಿಕ ಸಾಮ್ರಾಜ್ಯಶಾಹಿ ಮಸೀದಿಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, 1609 ಮತ್ತು 1616 ರ ನಡುವೆ ಅಹ್ಮದ್ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು ಎಂಬ ಉಲ್ಲೇಖವಿದೆ.

ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನ ಎಂದೂ ಕರೆಯಲ್ಪಡುವ ಮೀನಾಕ್ಷಿ ಅಮ್ಮನ್ ದೇವಾಲಯವು ಭಾರತದ ಅತ್ಯಂತ ಹಳೆಯ ಮತ್ತು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ, ಇದು ಆಶ್ಚರ್ಯಕರವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ತಮಿಳುನಾಡಿನ ಮಧುರೈ ನಗರದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಮಹಾನ್ ಪೌರಾಣಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ವಿಶ್ವದ ದ್ರಾವಿಡ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಭಾರತದ ತಾಜ್ ಮಹಲ್ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಉಸ್ತಾದ್ ಅಹ್ಮದ್ ಲಹೌರಿ ಅವರ ಮಾರ್ಗದರ್ಶನದಲ್ಲಿ 20,000 ಕುಶಲಕರ್ಮಿಗಳು ಅಮೃತಶಿಲೆಯನ್ನು ಬಳಸಿ ಈ ಭವ್ಯವಾದ ಕಟ್ಟಡವನ್ನು ನಿರ್ಮಿಸಿದ್ದಾರೆ. ಇದು ಪ್ರೀತಿಯ ಸಂಕೇತವಾಗಿದ್ದು, ಸಾಕಷ್ಟು ಪ್ರೇಮಿಗಳಿಗೆ ಇದು ನೆಚ್ಚಿನ ತಾಣವಾಗಿದೆ.

ಸೇಂಟ್ ಬೆಸಿಲ್ಸ್ ಕ್ಯಾಥೆಡ್ರಲ್ ಅನ್ನು 1555 ಮತ್ತು 1561 ರ ನಡುವೆ ರಷ್ಯಾದ ಮಾಸ್ಕೋದಲ್ಲಿ ಇವಾನ್ ದಿ ಟೆರಿಬಲ್ ಎಂಬವರು ನಿರ್ಮಿಸಿದ್ದಾರೆ. ಇದು ರಷ್ಯಾದ ಪ್ರಮುಖ ಸಾಂಸ್ಕೃತಿಕ ಸಂಕೇತಗಳಲ್ಲಿ ಒಂದಾಗಿದೆ. ಇಲ್ಲಿನ ಅದ್ಭುತ ವಾಸ್ತುಶಿಲ್ಪವು ನಿಮ್ಮನ್ನು ಬೆರಗುಗೊಳಿಸುವುದ್ದಂತೂ ನಿಶ್ಚಿತವಾಗಿದೆ.

ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿಯಾದ ಅಬುಧಾಬಿಯಲ್ಲಿದೆ. ದೇಶದ ಅತಿದೊಡ್ಡ ಮಸೀದಿಯಾಗಿರುವ ಇಲ್ಲಿ, ದೈನಂದಿನ ಪ್ರಾರ್ಥನೆಗಳಿಗೆ ಪ್ರಮುಖ ಪೂಜಾ ಸ್ಥಳವಾಗಿದೆ. ಈ ಮಸೀದಿಯನ್ನು 1994 - 2007 ರ ನಡುವೆ ನಿರ್ಮಿಸಲಾಗಿದೆ. ಇದು 60,570 ಚದರ ಅಡಿಗಳಷ್ಟು ವಿಸ್ತಾರವಾಗಿದೆ.

ನ್ಯೂಶ್ವಾನ್‌ಸ್ಟೈನ್ ಕ್ಯಾಸಲ್ 19 ನೇ ಶತಮಾನದ ಐತಿಹಾಸಿಕ ಅರಮನೆಯಾಗಿದ್ದು, ಜರ್ಮನಿಯ ನೈಋತ್ಯ ಬವೇರಿಯಾದ ಫುಸ್ಸೆನ್ ಬಳಿಯ ಹೊಹೆನ್ಸ್‌ವಾಂಗೌ ಗ್ರಾಮದ ಬೆಟ್ಟದ ಮೇಲಿದೆ. ಇದರ ನಿರ್ಮಾಣವು 1869 ರಲ್ಲಿ ಪ್ರಾರಂಭವಾಯಿತು ಮತ್ತು ಇದರ ವಿನ್ಯಾಸವು ಬೈಜಾಂಟೈನ್ ಮತ್ತು ಅರಬ್ ವಾಸ್ತುಶಿಲ್ಪದ ಅಂಶಗಳಿಂದ ಹೆಚ್ಚು ಪ್ರಭಾವಿತವಾಗಿದೆ. ಇದು ಪ್ರತಿ ವರ್ಷ 1.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಭಾರತದ ಭವ್ಯವಾದ ಶಿಲ್ಪ ಕಲೆಯನ್ನು ಸಾರಿ ಹೇಳುತ್ತಿದೆ,ಇಲ್ಲಿನ ಅಜಂತಾ ಮತ್ತು ಎಲ್ಲೋರಾದ ಶ್ರೀಮಂತ ಶಿಲ್ಪ ಕಲೆಗಳು. ಇವುಗಳು ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ಬಂಡೆಗಳನ್ನು ಕೆತ್ತಿ ನಿರ್ಮಿಸಲಾಗಿದೆ. ಎಲ್ಲೋರಾದ ಕೈಲಾಶ ದೇವಾಲಯವು ವಿಶ್ವದ ಅತಿದೊಡ್ಡ ಏಕಶಿಲೆಯ ಬಂಡೆಯ ಉತ್ಖನನವಾಗಿದೆ. ಮಹಾರಾಷ್ಟ್ರದಲ್ಲಿನ ಅಜಂತಾ ಗುಹೆಗಳಲ್ಲಿ ಕಲ್ಲಿನ ಸೂಕ್ಷ್ಮವಾದ ಕೆತ್ತನೆಗಳ ಶಿಲ್ಪಕಲೆಗಳನ್ನು ಹೊಂದಿರುವ ಗುಹೆಗಳ ನಿರ್ಮಾಣವನ್ನು ಕಾಣಬಹುದಾಗಿದೆ. ಇವುಗಳು ಸುಮಾರು ಕ್ರಿ.ಪೂ 2 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿರುವುದು ಎಂದು ಗುರುತಿಸಲಾಗಿದೆ. ಇಲ್ಲಿನ ಶಿಲ್ಪಕಲೆಗಳು ಬೌದ್ಧಮತಕ್ಕೆ ಸಂಬಂಧಿಸಿದ್ದಾಗಿದೆ. ಈ ಸುಂದರವಾದ ಅಜಂತಾ ಗುಹೆಗಳು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ.

ಡೋಮ್ ಆಫ್ ದಿ ರಾಕ್, ಜೆರುಸಲೆಮ್ ಈ ದೇವಾಲಯವು ಅದರ ಉತ್ತಮ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದು ಇಸ್ಲಾಮಿಕ್ ದೇವಾಲಯವಾಗಿದೆ ಮತ್ತು ಜೆರುಸಲೆಮ್ನ ಹಳೆಯ ನಗರದಲ್ಲಿ ಅತ್ಯಂತ ಪ್ರಸಿದ್ಧವಾದ ಹೆಗ್ಗುರುತಾಗಿದೆ. ಡೋಮ್ ಆಫ್ ದಿ ರಾಕ್ ಅಡಿಯಲ್ಲಿ ಇರುವ ಒಂದು ಸಣ್ಣ ಗುಹೆಯು ಜೆರುಸಲೆಮ್‌ನ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.