ಇಂಗ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ನವೆಂಬರ್ 13 ರಂದು ಪಾಕಿಸ್ತಾನ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಂಗ್ಲರು ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇಂಗ್ಲೆಂಡ್ ಟಿ20 ವಿಶ್ವಕಪ್ 2022 ರಲ್ಲಿ ಚಾಂಪಿಯನ್ ಆಗಲು ಬ್ಯಾಟರ್ಗಳು ಎಷ್ಟು ಕಾರಣವೋ ಅಷ್ಟೇ ಕೊಡುಗೆಯನ್ನು ಬೌಲರ್ಗಳು ನೀಡಿದ್ದಾರೆ. ಬೌಲರ್ಗಳ ಸಹಾಯದಿಂದಲೇ ಫೈನಲ್ನಲ್ಲಿ ಪಾಕ್ ಅನ್ನು 137 ರನ್ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲಾಯಿತು. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರ ಪೈಕಿ ಸ್ಪಿನ್ನರ್ ಆದಿಲ್ ರಶೀದ್ ಕೂಡ ಒಬ್ಬರು.
ರಶೀದ್ ಫೈನಲ್ನಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಮೊಹಮ್ಮದ್ ಹ್ಯಾರಿಸ್ ಹಾಗೂ ಬಾಬರ್ ಅಜಮ್ 2 ಪ್ರಮುಖ ವಿಕೆಟ್ ಕಿತ್ತರು. ವಿಶೇಷ ಎಂದರೆ ಪಂದ್ಯದ 12ನೇ ಓವರ್ನಲ್ಲಿ ಬಾಬರ್ ವಿಕೆಟ್ ಕಿತ್ತ ಇವರ ಓವರ್ ಮೇಡನ್ ಆಯಿತು. ಟಿ20 ವಿಶ್ವಕಪ್ ಫೈನಲ್ನಲ್ಲಿ ವಿಕೆಟ್ ಪಡೆದು ಮೇಡನ್ ಓವರ್ ಮಾಡಿದ 4ನೇ ಬೌಲರ್ ರಶೀದ್ ಆದರು.
ಇದೀಗ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆದಿಲ್ ರಶೀದ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ 2023 ಹರಾಜಿಗೆ ತನ್ನ ಹೆಸರನ್ನು ಕೂಡ ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಶೀದ್, ಸ್ಪಿನ್ ಬೌಲಿಂಗ್‌ಗೆ ಸಹಕಾರಿಯಾಗಿರುವ ಭಾರತೀಯ ಪಿಚ್‌ಗಳಿಗೆ ಎದುರಾಳಿ ತಂಡಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಇದೇ ವಿಚಾರ ಅವರ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಇನ್ನು ಐಪಿಎಲ್ 2022 ರಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿ ಐಪಿಎಲ್ ಹರಾಜಿನಲ್ಲಿ ಹೆಸರು ನೀಡಿದ್ದಾರೆ. ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆದು ಟಿ20 ವಿಶ್ವಕಪ್ ಫೈನಲ್ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಸ್ಟೋಕ್ಸ್ಗೆ ಹರಾಜಿನಲ್ಲಿ ಭರ್ಜರಿ ಬೇಡಿಕೆ ಇರುವುದಂತು ಸತ್ಯ.
ಇಂಗ್ಲೆಂಡ್‌ನ ಟಿ20 ಸ್ಪೆಷಲಿಸ್ಟ್ ಸ್ಯಾಮ್ ಬಿಲ್ಲಿಂಗ್ಸ್ ಐಪಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಬರೆದಿರುವ ಸ್ಯಾಮ್, ಮುಂದಿನ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ದೀರ್ಘ ಸ್ವರೂಪಗಳ ಮೇಲೆ ಹೆಚ್ಚು ಗಮನಹರಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಮತ್ತೋರ್ವ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಕೂಡ ಐಪಿಎಲ್ 2023 ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂಬ ವರದಿಗಳು ಬರುತ್ತಿದೆ. ಈಗಾಗಲೇ ಕೆಕೆಆರ್ ಹರಾಜಿಗೆ ಇವರನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿತ್ತು. ಈ ಬೆಳವಣಿಗೆಯ ಮದ್ಯೆಯೆ ಪ್ಯಾಟ್ ಕಮ್ಮಿನ್ಸ್ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ.
Published On - 9:33 am, Tue, 15 November 22