
ಪ್ಯಾನ್ ಇಂಡಿಯಾ ನಟ ಆಗಿರುವ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನಟಿಸಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಹೆಸರಿನ ಥ್ರಿಲ್ಲರ್ ಕಾಮಿಡಿ ಸಿನಿಮಾ ಜನವರಿ 12 ರಂದು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಬಿಡುಗಡೆ ಆಗಲಿದೆ.

ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ, ಶೈನ್ ಶೆಟ್ಟಿ, ಪ್ರಕಾಶ್ ತಮಿನಾಡು, ಶನಿಲ್ ಗುರು ಇನ್ನೂ ಕೆಲವು ಪ್ರತಿಭಾವಂತರು ನಟಿಸಿರುವ ‘ಏಕಂ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾ ಜೀ5ನಲ್ಲಿ ಬಿಡುಗಡೆ ಆಗಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಈ ಸಿನಿಮಾನಲ್ಲಿ ಏಳು ಕತೆಗಳಿವೆ.

ಯೋಗರಾಜ್ ಭಟ್ ನಿರ್ಮಾಣ ಮಾಡಿ ಅಮೋಲ್ ಪಾಟೀಲ್ ನಿರ್ದೇಶನ ಮಾಡಿದ್ದ ‘ಉಡಾಳ’ ಸಿನಿಮಾ ಈಗಾಗಲೇ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಹಾಡುಗಳು ಸಖತ್ ಹಿಟ್ ಆಗಿವೆ.

ಅಜಯ್ ರಾವ್ ಹಾಗೂ ಸೋನಲ್ ಮಂಥೆರೋ ಒಟ್ಟಿಗೆ ನಟಿಸಿರುವ ‘ರಾಧೆಯ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾ ಕಳೆದ ನವೆಂಬರ್ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿರುವ ನಟ ಕಿರಣ್ ರಾಜ್ ನಟಿಸಿರುವ ಸಿನಿಮಾ ‘ರೋನಿ’. ಈ ಸಿನಿಮಾ ಸಹ ಇದೇ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಈ ಸಿನಿಮಾ ಜೀ5ನಲ್ಲಿ ಸ್ಟ್ರೀಂ ಆಗುತ್ತಿದ್ದು ಆಸಕ್ತರು ವೀಕ್ಷಿಸಬಹುದು.

ನಂದಮೂರಿ ಬಾಲಕೃಷ್ಣ ದ್ವಿಪಾತ್ರದಲ್ಲಿ ನಟಿಸಿ, ಬೊಯಪಾಟಿ ಶ್ರೀನು ನಿರ್ದೇಶನ ಮಾಡಿರುವ ಆಕ್ಷನ್ ಸಿನಿಮಾ ‘ಅಖಂಡ 2’ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಚಿತ್ರಮಂದಿರದಲ್ಲಿ ಅಬ್ಬರಿಸಿತ್ತು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಅಬ್ಬರಿಸುತ್ತಿದೆ.

ಖ್ಯಾತ ನಟ ಶೇನ್ ನಿಗಮ್ ಸೇರಿದಂತೆ ಮಲಯಾಳಂ, ತಮಿಳಿನ ಕೆಲವು ಪ್ರತಿಭಾವಂತ ನಟರು ನಟಿಸಿರುವ ‘ಬಾಲ್ಟಿ’ ಸಿನಿಮಾ ಇದೇ ವಾರ ಪ್ರೈಂ ವಿಡಿಯೋನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಇದು ಕ್ರೀಡೆಯನ್ನು ಒಳಗೊಂಡ ಆಕ್ಷನ್ ಸಿನಿಮಾ ಆಗಿದೆ. ಅಂತೆಯೇ ‘ಅಂಗಮ್ಮಲ್’ ಹೆಸರಿನ ಸಾಮಾಜಿಕ ಕಳಕಳಿಯ ತಮಿಳು ಸಿನಿಮಾ ಸನ್ ನೆಕ್ಸ್ಟ್ನಲ್ಲಿ ಬಿಡುಗಡೆ ಆಗಿದೆ.

ಅಜಯ್ ದೇವಗನ್, ರಕುಲ್ ಪ್ರೀತ್ ಸಿಂಗ್, ಆರ್ ಮಾಧವನ್ ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿರುವ ‘ದೇ ದೆ ಪ್ಯಾರ್ ದೆ 2’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.