
ಶನಿವಾರ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಬಿಲಿಯರ್ಡ್ಸ್‌ನ ಫೈನಲ್‌ನಲ್ಲಿ ಭಾರತದ ದಂತಕಥೆ ಪಂಕಜ್ ಅಡ್ವಾಣಿ ತಮ್ಮ ದೇಶವಾಸಿ ಸೌರವ್ ಕೊಠಾರಿ ಅವರನ್ನು 4-0 ಅಂತರದಿಂದ ಸೋಲಿಸುವ ಮೂಲಕ ತಮ್ಮ ವೃತ್ತಿಜೀವನದ 25 ನೇ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಗೇಮ್ ಆರಂಭದಿಂದಲೂ ಕೊಠಾರಿ ವಿರುದ್ಧ ಮೇಲುಗೈ ಸಾಧಿಸಿದ ಅಡ್ವಾಣಿ, 150 ಪ್ಲಸ್ ಫಾರ್ಮ್ಯಾಟ್‌ನಲ್ಲಿ 149 ರ ಬ್ರೇಕ್‌ನೊಂದಿಗೆ ಮೊದಲ ಫ್ರೇಮ್ ಅನ್ನು ಗೆದ್ದರು. ಅಲ್ಲಿಯವರೆಗೆ ಕೊಠಾರಿ ಖಾತೆಯನ್ನು ತೆರೆದಿರಲಿಲ್ಲ.

ಈ 'ಬೆಸ್ಟ್ ಆಫ್ ಸೆವೆನ್' ಫೈನಲ್‌ನಲ್ಲಿ ಅಡ್ವಾಣಿ ಅವರು ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಐದನೇ ಬಾರಿಗೆ ರಾಷ್ಟ್ರೀಯ, ಏಷ್ಯನ್ ಮತ್ತು ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ಗೆದ್ದ ವಿಶಿಷ್ಟ ದಾಖಲೆಯನ್ನು ನಿರ್ಮಿಸಿದರು. ಎರಡನೇ ಫ್ರೇಮ್‌ನಲ್ಲಿ ಕೊಠಾರಿಗೆ ಕೆಲವು ಅವಕಾಶಗಳು ಸಿಕ್ಕರೂ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ.

ನಂತರ ಮಾತನಾಡಿದ ಅಡ್ವಾಣಿ, "ಸತತ ಐದನೇ ಬಾರಿಗೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಕನಸು ನನಸಾಗಿದೆ. ನಾನು ಆಡಿದ ರೀತಿ ಮತ್ತು ಈ ವರ್ಷ ಪ್ರತಿ ಬಿಲಿಯರ್ಡ್ಸ್ ಪಂದ್ಯಾವಳಿಯನ್ನು ಗೆದ್ದ ರೀತಿಯಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಮತ್ತೊಂದು ಚಿನ್ನದ ಪದಕವನ್ನು ಗೆದ್ದಿದ್ದೇನೆ. ಜೊತೆಗೆ ವಿಶ್ವ ಮಟ್ಟದಲ್ಲಿ ನನ್ನ ದೇಶಕ್ಕೆ ಹೆಮ್ಮೆ ತಂದಿರುವುದು ನನಗೆ ಸಂತಸ ತಂದಿದೆ ಎಂದಿದ್ದಾರೆ.

12 ತಿಂಗಳ ಹಿಂದೆ ಕತಾರ್‌ನಲ್ಲಿ IBSF 6-ರೆಡ್ ಸ್ನೂಕರ್ ವಿಶ್ವಕಪ್ ಗೆದ್ದಿದ್ದ ಅಡ್ವಾಣಿ ಮತ್ತೊಮ್ಮೆ ತಮ್ಮ ಚಾಂಪಿಯನ್ ಆಟವನ್ನು ಪ್ರದರ್ಶಿಸಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.
Published On - 7:23 pm, Sat, 8 October 22