ಸರ್ಕಾರಿ ಉದ್ಯೋಗಿಗಳು ರಿಟೈರ್ ಆದಾಗ ಪಿಂಚಣಿ ಬರುತ್ತದೆ. ಖಾಸಗಿ ನೌಕರಿಯಲ್ಲಿರುವವರಿಗೆ ಪಿಂಚಣಿ ಸಿಗುವುದಿಲ್ಲ. ಇಪಿಎಫ್ ಇದ್ದರೆ ಅದರಿಂದ ಲಂಪ್ಸಮ್ ಹಣ ಪಡೆಯಬಹುದು. ಈ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ನಿಯಮಿತ ಆದಾಯ ಬರುವಂತೆ ಹೇಗೆ ಮಾಡಬೇಕು ಎನ್ನುವ ಗೊಂದಲ ಅನೇಕರಲ್ಲಿ ಇರುತ್ತದೆ.
ರಿಟೈರ್ ಆದಾಗ ಪ್ರಮುಖ ಆದಾಯ ಮೂಲ ಇರುವುದಿಲ್ಲ. ಹೀಗಾಗಿ, ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕ್. ಬ್ಯಾಂಕ್ ಎಫ್ಡಿಯಲ್ಲಿ ಹೆಚ್ಚಿನ ಬಡ್ಡಿ ಆದಾಯ ಸಿಗುವುದಿಲ್ಲ. ಇದೇ ಹೊತ್ತಲ್ಲಿ ಪೋಸ್ಟ್ ಆಫೀಸ್ನಲ್ಲಿ ವೃದ್ಧಾಪ್ಯಕ್ಕೆಂದೇ ರೂಪಿಸಲಾಗಿರುವ ಎಸ್ಸಿಎಸ್ಎಸ್ ಸ್ಕೀಮ್ ಅನ್ನು ಪರಿಗಣಿಸಬಹುದು. ಪೋಸ್ಟ್ ಆಫೀಸ್ ಸ್ಕೀಮ್ಗಳಲ್ಲೇ ಅತಿಹೆಚ್ಚು ಬಡ್ಡಿ ಕೊಡುವ ಸ್ಕೀಮ್ಗಳಲ್ಲಿ ಇದೂ ಒಂದು.
ಸೀನಿಯರ್ ಸಿಟಜನ್ ಸೇವಿಂಗ್ಸ್ ಸ್ಕೀಮ್ ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿ, ಮಾಸಿಕವಾಗಿ 20,000 ರೂವರೆಗೆ ಆದಾಯ ಪಡೆಯಬಹುದು. ಕಾಯುವಿಕೆ ಅವಧಿ ಇರುವುದಿಲ್ಲ. ಐದು ವರ್ಷಕ್ಕೆ ಸ್ಕೀಮ್ ಮೆಚ್ಯೂರಿಟಿ ಆಗುತ್ತದೆ. ನಿಮಗೆ ಬೇಕಾದಲ್ಲಿ ಮೂರು ವರ್ಷ ವಿಸ್ತರಣೆ ಮಾಡಬಹುದು.
60 ವರ್ಷ ದಾಟಿದ ವೃದ್ಧರು ಅಥವಾ 55 ವರ್ಷ ವಯಸ್ಸು ದಾಟಿ ವಿಆರ್ಎಸ್ ಪಡೆದವರು ಎಸ್ಸಿಎಸ್ಎಸ್ ಸ್ಕೀಮ್ನಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 1,000 ರೂನಿಂದ 30 ಲಕ್ಷ ರೂವರೆಗೆ ನೀವು ಲಂಪ್ಸಮ್ ಹಣವನ್ನು ಹೂಡಿಕೆ ಮಾಡಬಹುದು. ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.
ನೀವು 30 ಲಕ್ಷ ರೂ ಲಂಪ್ಸಮ್ ಹಣವನ್ನು ಈ ಪೋಸ್ಟ್ ಆಫೀಸ್ನ ಸ್ಕೀಮ್ನಲ್ಲಿ ಹೂಡಿಕೆ ಮಾಡಿದ್ದೇ ಆದಲ್ಲಿ ವರ್ಷಕ್ಕೆ 2.46 ಲಕ್ಷ ರೂ ಬಡ್ಡಿ ಆದಾಯವೇ ಸೃಷ್ಟಿಯಾಗುತ್ತದೆ. ಮೂರು ತಿಂಗಳಿಗೊಮ್ಮೆ ನೀವು ಹಣ ಪಡೆಯಬಹುದು. ಮಾಸಿಕವಾಗಿ ನಿಮಗೆ 20,500 ರೂ ಆದಾಯ ಸಿಕ್ಕಂತಾಗುತ್ತದೆ. ಅಲ್ಲದೇ, ಈ ಸ್ಕೀಮ್ನಲ್ಲಿ ನಿಮ್ಮ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಅವಕಾಶವೂ ಇರುತ್ತದೆ.