Updated on: Dec 11, 2022 | 12:50 PM
ಭಾರತೀಯ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿರುವ ಭಾರತೀಯ ಒಲಿಂಪಿಕ್ ಸಂಸ್ಥೆ, ತನ್ನ (ಐಒಎ) ಮೊದಲ ಮಹಿಳಾ ಅಧ್ಯಕ್ಷರಾಗಿ ಹಿರಿಯ ಅಥ್ಲೀಟ್ ಪಿಟಿ ಉಷಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ರನ್ನಿಂಗ್ ರೇಸ್ನಲ್ಲಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಉಷಾ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಅನೇಕ ಪದಕಗಳನ್ನು ಗೆದಿದ್ದರು. ಹಾಗೆಯೇ 1984 ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನಾಗೇಶ್ವರ ರಾವ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಈ ಚುನಾವಣೆಯಲ್ಲಿ ಉಷಾ ಅವರಿಗೆ ಪ್ರತಿ ಸ್ಪರ್ಧಿಯೇ ಇರಲಿಲ್ಲ. ಹೀಗಾಗಿ ಉಷಾ ಅವರು ಅವಿರೋಧವಾಗಿ ಈ ಸ್ಥಾನಕ್ಕೆ ಆಯ್ಕೆಯಾದರು. ಉಷಾ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಐಒಎಯಲ್ಲೂ ಬಣ ರಾಜಕೀಯದಿಂದ ಉದ್ಭವಿಸಿದ್ದ ಬಿಕ್ಕಟ್ಟು ಅಂತ್ಯಗೊಂಡಿದೆ. ವಾಸ್ತವವಾಗಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಈ ತಿಂಗಳು ಐಒಎ ಚುನಾವಣೆ ನಡೆಸದಿದ್ದರೆ, ಸಂಸ್ಥೆಯನ್ನು ಅಮಾನತು ಮಾಡುವುದಾಗಿ ಬೆದರಿಕೆ ಹಾಕಿತ್ತು.
ಅಧ್ಯಕ್ಷ ಸ್ಥಾನಕ್ಕೆ ಉಷಾ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಕಳೆದ ತಿಂಗಳು ಉನ್ನತ ಹುದ್ದೆಗೆ ಉಷಾ ಅವರ ಆಯ್ಕೆಯನ್ನು ಅಂತಿಮಗೊಳಿಸಲಾಗಿತ್ತು. ಜುಲೈನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಉಷಾ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಯಾರೂ ವಿರೋಧಿಸದಿರುವುದು ಆಯ್ಕೆ ಪ್ರಕ್ರಿಯೆ ಸುಲಭವಾಗಿ ಮುಕ್ತಾಯಗೊಳ್ಳುವಂತೆ ಮಾಡಿತು.
95 ವರ್ಷಗಳ ಐಒಎ ಇತಿಹಾಸದಲ್ಲಿ ಅಧ್ಯಕ್ಷರಾದ ಮೊದಲ ಒಲಿಂಪಿಯನ್ ಮತ್ತು ಮೊದಲ ಅಂತರರಾಷ್ಟ್ರೀಯ ಪದಕ ವಿಜೇತ ಕ್ರೀಡಾಪಟು ಎಂಬ ಖ್ಯಾತಿಗೆ ಉಷಾ ಭಾಜನರಾಗಿದ್ದಾರೆ. ಇದರೊಂದಿಗೆ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾದ್ದಂತ್ತಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದರೊಂದಿಗೆ, ಮಹಾರಾಜ ಯದ್ವೇಂದ್ರ ಸಿಂಗ್ ನಂತರ ಐಒಎ ಮುಖ್ಯಸ್ಥರಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಉಷಾ ಪಾತ್ರರಾಗಿದ್ದಾರೆ. 1934 ರಲ್ಲಿ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಯದ್ವೇಂದ್ರ ಸಿಂಗ್ ಅವರು 1938 ರಿಂದ 1960 ರವರೆಗೆ ಐಒಎ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.