
ಕೈಗೆಟಕುವ ದರದಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ವಿಮಾನಯಾನಗಳನ್ನು ಒದಗಿಸುತ್ತಿರುವ ಭಾರತೀಯ ಸಂಸ್ಥೆಯೇ ಈ ಇಂಡಿಗೋ ಏರ್ ಲೈನ್ಸ್ . ಇಬ್ಬರೂ ಸ್ನೇಹಿತರು ಕಟ್ಟಿ ಬೆಳೆಸಿದ ಇಂಡಿಗೋ ಸಂಸ್ಥೆಯೂ ಇಂದು ನಂಬರ್ ಒನ್ ಏರ್‌ಲೈನ್ಸ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

2006ರಲ್ಲಿ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ, ಸ್ನೇಹಿತರು ಮತ್ತು ಸಹ-ಸಂಸ್ಥಾಪಕರು, ಇಂಡಿಗೋ ಏರ್ಲೈನ್ಸ್ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ಎಂಬ ಇಬ್ಬರೂ ಸ್ನೇಹಿತರು ಬೇರೆ ಬೇರೆ ವೃತ್ತಿ ಹಿನ್ನಲೆಯುಳ್ಳವರು. ಹೀಗಾಗಿ ಇಂಡಿಗೋ ಏರ್ ಲೈನ್ಸ್ ಆರಂಭಿಸುವುದಕ್ಕೂ ಮುಂಚೆ ಇಬ್ಬರಲ್ಲಿಯೂ ಸಣ್ಣದೊಂದು ಹಿಂಜರಿಕೆಯಿತ್ತು.

ಗಂಗ್ವಾಲ್ ಅವರಿಗಿದ್ದ ವಾಯುಯಾನ ಪರಿಣತಿ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ಜ್ಞಾನ ಹೊಂದಿದ್ದ ರಾಹುಲ್ ಭಾಟಿಯಾ ಇಬ್ಬರೂ ತಮ್ಮ ಆಲೋಚನೆಯನ್ನು ಒಟ್ಟು ಸೇರಿಸಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಇದೀಗ ದೇಶದ ಪ್ರಮುಖ ನಗರಗಳಿಗೆ ವಿಮಾನದ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯೂ ಶ್ರಮಿಸಿದ್ದು ಮಧ್ಯಮ ವರ್ಗದ ಜನರ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿದೆ.

ಸರಿಸುಮಾರು ಹದಿನೆಂಟು ವರ್ಷಗಳ ಹಿಂದೆ ಆರಂಭವಾದ ಈ ಸಂಸ್ಥೆಯೂ ಗಂಗ್ವಾಲ್ ಮತ್ತು ಭಾಟಿಯಾರವರ ಆಲೋಚನೆಗಳಿಂದ ಉತ್ತುಂಗಕ್ಕೇರಲು ಸಾಧ್ಯವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಸಾಧಿಸಿದ್ದು, ಇಂದು ಯಾರು ಕೂಡ ಊಹೆ ಮಾಡದ ಮಟ್ಟಿಗೆ ಸಂಸ್ಥೆಯೂ ಬೆಳೆದು ವಿಮಾನಯಾನ ಸೇವೆಗಳನ್ನು ನೀಡುತ್ತಿದೆ.

ಕಳೆದ 2020 ರಲ್ಲಿ ರಾಕೇಶ್ ಗಂಗ್ವಾಲ್ ಮತ್ತು ರಾಹುಲ್ ಭಾಟಿಯಾ ನಡುವೆ ವಿವಾದವೊಂದು ಉಂಟಾಗಿತ್ತು. ಗಂಗ್ವಾಲ್ ಕಂಪನಿಯ ಆರ್ಟಿಕಲ್ ಆಫ್ ಅಸೋಸಿಯೇಷನ್ ನಿಯಮಗಳಲ್ಲಿ ಬದಲಾವಣೆಗೆ ಆಗ್ರಹಿಸಿದ್ದರು. ಆ ಬಳಿಕ ಗಂಗ್ವಾಲ್ ಅವರು ಫೆಬ್ರವರಿ 2022 ರಲ್ಲಿ ಕಂಪನಿಯ ಮಂಡಳಿಗೆ ರಾಜೀನಾಮೆ ನೀಡಿದ್ದರು. ತದನಂತರದಲ್ಲಿ ರಾಕೇಶ್ ಗಂಗ್ವಾಲ್ ಅವರು USD 450 ಮಿಲಿಯನ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು ಎನ್ನಲಾಗಿತ್ತು.