ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸುವ ಮೂಲಕ ಮತ್ತೆ ಸಾಕಷ್ಟು ಜೀವಗಳನ್ನು ಬಲಿ ಪಡೆದಿದೆ.
ಕ್ರೈಮಿಯಾವನ್ನು ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ದಾಳಿಯ ಬಳಿಕ ರಷ್ಯಾ ಉಕ್ರೇನ್ ಮೇಲೆ ಇದುವರೆಗಿನ ಅತ್ಯಂತ ಭೀಕರ ದಾಳಿಯನ್ನು ನಡೆಸಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾವನ್ನು ರಷ್ಯಾ ಸಂಪರ್ಕಿಸುವ ಸೇತುವೆಯನ್ನು ಉಕ್ರೇನ್ ಸ್ಫೋಟಿಸಿತ್ತು.
. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ಝರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಆ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.
ದಕ್ಷಿಣ ಉಕ್ರೇನ್ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 70ನೇ ವರ್ಷಕ್ಕೆ ಕಾಲಿಟ್ಟ ಮರುದಿನವೇ ಈ ಸ್ಫೋಟ ನಡೆದಿತ್ತು.
ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಇಡೀ ದೇಶದ ಹಲವು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ರಷ್ಯಾ ಕನಿಷ್ಠ 75 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್ ಹೇಳಿದೆ.
ಈ ಮೂಲಕ 2 ದಿನಗಳ ಹಿಂದೆಯಷ್ಟೇ ರಷ್ಯಾಕ್ಕೆ ತಿರುಗೇಟು ನೀಡಿದ್ದ ಉಕ್ರೇನ್ ವಿರುದ್ಧ ರಾಕೆಟ್ ದಾಳಿ ಮಾಡುವ ಮೂಲಕ ರಷ್ಯಾ ಸೇಡು ತೀರಿಸಿಕೊಂಡಿದೆ.
ರಷ್ಯಾದ ದಾಳಿಗಳು ಉಕ್ರೇನ್‌ನ ಅನೇಕ ಸ್ಥಳಗಳಲ್ಲಿ ಭಾರೀ ಹಾನಿಯನ್ನುಂಟು ಮಾಡಿವೆ. ಕೈವ್ ಹೊರತುಪಡಿಸಿ, ಖ್ಮೆಲ್ನಿಟ್ಸ್ಕಿ, ಝೈಟೊಮಿರ್ ಮತ್ತು ಎಲ್ವಿವ್ ಕೂಡ ರಷ್ಯಾದ ದಾಳಿಗೆ ಒಳಗಾಗಿವೆ. ಸೆಂಟ್ರಲ್ ಕೈವ್ ನಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ ಎಂದು ಕೈವ್ ಮೇಯರ್ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಕಚೇರಿ ಬಳಿಯೂ ವೈಮಾನಿಕ ದಾಳಿ ನಡೆದಿದೆ. ಈ ದಾಳಿಗಳನ್ನು ಭಯೋತ್ಪಾದಕರ ಸಂಚು ಎಂದು ಅವರು ಕರೆದಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಮ್ಮ ದೇಶದ ನಾಗರಿಕರಿಗೆ ಮನವಿ ಮಾಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ರಷ್ಯಾ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ, ಆದ್ದರಿಂದ ಮನೆಯೊಳಗೆ ಇರಿ ಎಂದು ಅವರು ಹೇಳಿದ್ದಾರೆ.
ಪಾಶ್ಚಿಮಾತ್ಯ ಶಕ್ತಿಗಳು ರಷ್ಯಾವನ್ನು ಪ್ರತ್ಯೇಕವಾಗಿಡಬೇಕೆಂದು ಹೇಳುತ್ತಿರುವಾಗ, ಉಕ್ರೇನ್ ಸೋಮವಾರ ನಡೆದ ತುರ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾವನ್ನು "ಭಯೋತ್ಪಾದಕ ದೇಶ" ಎಂದು ಖಂಡಿಸಿದೆ. ರಷ್ಯಾ ಮತ್ತೆ ಭಯೋತ್ಪಾದಕ ದೇಶ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಅದನ್ನು ಪ್ರಬಲವಾದ ರೀತಿಯಲ್ಲಿ ತಡೆಯಬೇಕು ಎಂದು ವಿಶ್ವಸಂಸ್ಥೆಗೆ ಉಕ್ರೇನ್‌ನ ರಾಯಭಾರಿ ಸರ್ಗಿ ಕಿಸ್ಲಿತ್ಸ್ಯ ಒತ್ತಾಯಿಸಿದ್ದಾರೆ.