
ಉಡುಪಿ ಶ್ರೀ ಕೃಷ್ಣಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವ ಸಂಭ್ರಮ ಮನೆಮಾಡಿದ್ದು ಬೆಳಗ್ಗಿನ ಜಾವ ನಡೆದ ಅದ್ಧೂರಿ ಮೆರವಣಿಗೆಯನ್ನು ಭಕ್ತರು ರಾತ್ರಿಯಿಡೀ ಕಾದು ಕಣ್ತುಂಬಿಕೊಂಡಿದ್ದಾರೆ. ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಪೀಠಾರೋಹಣ ಮಾಡಿದ್ದು, ಸರ್ವಜ್ಞ ಪೀಠಾರೋಹಣ ಮಾಡಿದ ಅತ್ಯಂತ ಎಳೆಯ ಪ್ರಾಯದ ಯತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಮುಂದಿನ 2 ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರುಶ್ರೀಗಳು ಪಡೆದಿದ್ದರೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ 4ನೇ ಪರ್ಯಾಯ ಮಹೋತ್ಸವ ಸಮಾಪನವಾಗಿದೆ.

ಶ್ರೀ ಕೃಷ್ಣ ಮಠದ ಇತಿಹಾಸದಲ್ಲಿದು 253ನೇ ದ್ವೈವಾರ್ಷಿಕ ಪರ್ಯಾಯವಾಗಿದ್ದು, ವೇದವರ್ಧನ ತೀರ್ಥರ ಪ್ರಥಮ ಪರ್ಯಾಯವಾಗಿದೆ. ಮಧ್ಯರಾತ್ರಿ 1.30ಕ್ಕೆ ಕಾಪು ತಾಲೂಕಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ನಡೆದು, ಬೆಳಗಿನ ಜಾವ 3 ಗಂಟೆಗೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭವಾಗಿದೆ. ನೂರಕ್ಕೂ ಅಧಿಕ ಸಾಂಸ್ಕೃತಿಕ ತಂಡಗಳು, ಟ್ಯಾಬ್ಲೋಗಳು, ಭಜನಾ ತಂಡಗಳು ಈ ವೇಳೆ ಗಮನ ಸೆಳೆದಿವೆ.

ಮೆರವಣಿಗೆಯ ಕೊನೆಯಲ್ಲಿ ಅಷ್ಟಮಠಾಧೀಶರ ಪಲ್ಲಕ್ಕಿ ಮೆರವಣಿಗೆ ನಡೆದಿದ್ದು, ಪರ್ಯಾಯ ಮಠಾಧೀಶರಾದ ವೇದವರ್ಧನ ತೀರ್ಥರು ಹೆಗಲುಕೊಟ್ಟು ಹೊರುವ ಮೇನೆಯಲ್ಲಿ ಬಂದಿದ್ದು ವಿಶೇಷವಾಗಿತ್ತು. ಇತರ ಆರು ಮಠಾಧೀಶರು ವಾಹನದ ಪಲ್ಲಕ್ಕಿಯಲ್ಲಿ ಆಗಮಿಸಿದ್ದು, ಟ್ಯಾಬ್ಲೋಗಳ ಜೊತೆಗೆ ಶೀರೂರು ಮಠದ ಹಿಂದಿನಿ ಶ್ರೀಗಳಾದ ಕೀರ್ತಿಶೇಷ ಲಕ್ಷ್ಮೀವರ ತೀರ್ಥರ ಪ್ರತಿಕ್ರೃತಿ ಮೆರವಣಿಗೆ ಗಮನ ಸೆಳೆಯಿತು.

ಬೆಳಿಗ್ಗೆ 5.15ಕ್ಕೆ ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನ ಮಾಡಿದ ವೇದವರ್ಧನ ತೀರ್ಥರು, ಬಳಿಕ ರಥಬೀದಿಯಲ್ಲಿರುವ ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಬಳಿಕ ಪುತ್ತಿಗೆ ಮಠದ ಶ್ರೀಗಳಿಂದ ಶೀರೂರು ಶ್ರೀಗಳಿಗೆ ಅಕ್ಷಯ ಪಾತ್ರೆ ಹಸ್ತಾಂತರ, ಸರ್ವಜ್ಞ ಪೀಠಾರೋಹಣ ಸೇರಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದಿವೆ. ಅಷ್ಟ ಮಠಾಧೀಶರಿಗೆ ಅರಳು ಗದ್ದುಗೆ ಗೌರವ ನಡೆದಿದ್ದು, ಅನೇಕ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

ಕೃಷ್ಣಮಠದ ಆಡಳಿತವನ್ನು ಅಷ್ಟಮಠಗಳ ನಡುವೆ ಎರಡು ವರ್ಷಗಳಿಗೊಮ್ಮೆ ಹಸ್ತಾಂತರಿಸುವ ಒಂದು ಪುರಾತನ ಮತ್ತು ವಿಶಿಷ್ಟ ವ್ಯವಸ್ಥೆಯೇ ಈ ಪರ್ಯಾಯ ಪದ್ಧತಿಯಾಗಿದ್ದು, ತಲಾ 2 ವರ್ಷಗಳ ಅವಧಿಗೆ ಅಷ್ಟಮಠಗಳಿಗೆ ಶ್ರೀಕೃಷ್ಣ ಮಠದ ಜವಾಬ್ದಾರಿ ಮತ್ತು ದೇವರ ಪೂಜೆಯ ಅಧಿಕಾರ ಈ ಮೂಲಕ ಸಿಗಲಿದೆ. ಪರ್ಯಾಯ ಮಹೋತ್ಸವ ಹಿನ್ನೆಲೆ ಉಡುಪಿಗೆ ಉಡುಪಿಯೇ ರಾತ್ರಿ ಪೂರ್ತಿ ಎದ್ದಿದ್ದು, ಅಪರೂಪದ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.