Updated on: Sep 19, 2022 | 6:10 PM
ಪೆಟ್ರೋಲ್-ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿದ್ದಂತೆ ವಾಹನ ಪ್ರಿಯರು ಎಲೆಕ್ಟ್ರಿಕ್ ವೆಹಿಕಲ್ನತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಿದೆ. ಆದರೆ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ತುಸು ದುಬಾರಿ ಎಂಬ ಮಾತು ಕೇಳಿ ಬರುತ್ತದೆ. ಆದರೆ ಇದೀಗ ಸಾಮಾನ್ಯ ಬೆಲೆಗೆ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ ಭಾರತದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಸ್ಟ್ರೋಮ್ ಮೋಟಾರ್ಸ್.
ಸ್ಟ್ರೋಮ್ ಮೋಟಾರ್ಸ್ ಕಂಪೆನಿಯು R3 ಹೆಸರಿನ ಸಣ್ಣ ಮಾದರಿಯ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಿದ್ದು, ಶೀಘ್ರದಲ್ಲೇ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವಿಶೇಷ ಎಂದರೆ ಭಾರತದ ಇತರೆ ಎಲೆಕ್ಟ್ರಿಕ್ ಕಾರುಗಳು ಹೋಲಿಸಿದರೆ ಸ್ಟ್ರೋಮ್ ಆರ್3 ಕಾರು ಅತ್ಯುತ್ತಮ ರೇಂಜ್ (ಮೈಲೇಜ್) ನೀಡಲಿದೆ.
ಅಂದರೆ ಈ ಕಾರಿನಲ್ಲಿ 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರ್ ನೀಡಲಾಗಿದ್ದು, ಇದು 15 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಹಾಗೆಯೇ ಕಾರಿನ ಟಾರ್ಕ್ 90 ಎನ್ಎಂ ಆಗಿರುತ್ತದೆ. ಇನ್ನು ಈ ಕಾರನ್ನು ಮೂರು ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದು. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 200 ಕಿ.ಮೀ. ದೂರದವರೆಗೆ ಪ್ರಯಾಣಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.
ಇದು ಮೂರು ಚಕ್ರದ ಕಾರು ಎಂಬುದು ವಿಶೇಷ. ಅಂದರೆ ಮುಂಭಾಗದಲ್ಲಿ 2 ಟಯರ್ಗಳನ್ನು ನೀಡಲಾಗಿದ್ದರೆ, ಹಿಂಭಾಗದಲ್ಲಿ ಏಕೈಕ ಟಯರ್ ನೀಡಲಾಗಿದೆ. ಇದಾಗ್ಯೂ ಈ ಕಾರಿನ ಗರಿಷ್ಠ ವೇಗವು 80 ಕಿ.ಮೀ. ಇದೆ. ಹೀಗಾಗಿ ದೂರದ ಪ್ರಯಾಣಕ್ಕೂ ಈ ಕಾರನ್ನು ಬಳಸಿಕೊಳ್ಳಬಹುದು.
ಡೈಮಂಡ್ ಕಟ್ ವಿನ್ಯಾಸದಲ್ಲಿ ರೂಪಿಸಲಾಗಿರುವ ಈ ತ್ರಿಚಕ್ರ ವಾಹನದಲ್ಲಿ ಸನ್ ರೂಫ್ ಕೂಡ ನೀಡಲಾಗಿರುವುದು ಮತ್ತೊಂದು ವಿಶೇಷ. ಅಷ್ಟೇ ಅಲ್ಲದೆ ಈ ಕಾರಿನಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ.
ಇನ್ನು R3 ಕಾರಿನಲ್ಲಿ ಒಂದೇ ಡೋರ್ ಕೂಪ್ ನೀಡಲಾಗಿದೆ. ಹಾಗೆಯೇ ಕೀ ಲೆಸ್ ಎಂಟ್ರಿ, ಪವರ್ ವಿಂಡೋ, ಡಿಜಿಟಲ್ ಡಿಸ್‌ಪ್ಲೇ, ಕ್ಲೈಮೇಟ್ ಕಂಟ್ರೋಲ್ ಎಸಿ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಜಿಪಿಎಸ್ ನ್ಯಾವಿಗೇಷನ್ ಮತ್ತು ಗೆಸ್ಚರ್ ಕಂಟ್ರೋಲ್ ಸಹ ಇರಲಿದೆ. ಹಾಗೆಯೇ ಪಾರ್ಕಿಂಗ್ ಅಸಿಸ್ಟ್ ಮತ್ತು ರಿವರ್ಸ್ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ.
ಸ್ಟ್ರೋಮ್ ಮೋಟಾರ್ಸ್ ಮೂಲಗಳ ಮಾಹಿತಿ ಪ್ರಕಾರ ಸ್ಟ್ರೋಮ್ R3 ಕಾರಿನ ಆರಂಭಿಕ ಬೆಲೆ 4.5 ಲಕ್ಷ ರೂ. ಇರಲಿದೆ. ಅಂದರೆ 5 ಲಕ್ಷಕ್ಕೂ ಕಡಿಮೆ ಬೆಲೆಗೆ ಆರ್3 ಭಾರತೀಯ ರಸ್ತೆಗಳಿದರೆ ಎಲೆಕ್ಟ್ರಿಕ್ ಕಾರುಗಳಿಗೆ ದೊಡ್ಡ ಪೈಪೋಟಿ ನೀಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
Published On - 6:10 pm, Mon, 19 September 22