Kannada News Photo gallery Tungabhadra reservoir overflow koppal Raichur Vijayanagara Ballari paddy farmers express happiness kannada news
ತುಂಗಭದ್ರಾ ಜಲಾಶಯ ಭರ್ತಿ; ಭತ್ತ ಬೆಳೆಯುವ ರೈತರಲ್ಲಿ ಮಂದಹಾಸ, ಕಣಜ ಖ್ಯಾತಿಯ ಪ್ರದೇಶದಲ್ಲಿ ನಾಟಿ ಶುರು
ರಾಜ್ಯದ ಭತ್ತದ ಕಣಜ ಎಂದು ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಕರೆಯುತ್ತಾರೆ. ಅದರಲ್ಲೂ ತುಂಗಭದ್ರಾ ನದಿ ಪಾತ್ರದಲ್ಲಿ ಬೆಳೆಯುವ ಭತ್ತಕ್ಕೆ ಹೆಚ್ಚಿನ ಡಿಮ್ಯಾಂಡ್ ಇದೆ. ಆದ್ರೆ ಕಳೆದ ಬಾರಿ ತುಂಗಭದ್ರಾ ಜಲಾಶಯ ಬರಿದಾಗಿದ್ದರಿಂದ ರೈತರು ಎರಡನೆ ಬೆಳೆ ಬೆಳೆದಿರಲಿಲ್ಲಾ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಬರದೇ ಇದ್ದಿದರಿಂದ ಭತ್ತದ ಬೆಳೆಗಾರರು ಕಂಗಾಲಾಗಿದ್ದರು. ಆದರೆ ಇದೀಗ ತುಂಗಭದ್ರಾ ಡ್ಯಾಂ ತುಂಬುತ್ತಿರುವುದರಿಂದ ಭತ್ತ ಬೆಳೆಗಾರರ ಸಂತಸ ಇಮ್ಮಡಿಯಾಗಿದೆ. ಭತ್ತ ನಾಟಿಗೆ ತಯಾರಿ ಆರಂಭಿಸಿದ್ದಾರೆ.
1 / 7
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಪ್ಪಳ ತಾಲೂಕಿನ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಡ್ಯಾಂನಲ್ಲಿ ಸದ್ಯ 97 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಡ್ಯಾಂಗೆ 84 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇರುವುದರಿಂದ ನಾಳೆಯೊಳಗೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಲಿದೆ.
2 / 7
ತುಂಗಭದ್ರಾ ಜಲಾಶಯ ತುಂಬುತ್ತಿರುವುದು ಡ್ಯಾಂ ಕೆಳಭಾಗದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಭತ್ತ ಬೆಳೆಯುವ ರೈತರ ಸಂತಸವನ್ನು ಹೆಚ್ಚಿಸಿದೆ. ತುಂಗಭದ್ರಾ ನದಿಯ ನೀರನ್ನು ಬಳಸಿಕೊಂಡು ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ಹೀಗಾಗಿಯೇ ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ರಾಜ್ಯದ ಭತ್ತದ ಕಣಜ ಅಂತಲೇ ಕರೆಯುತ್ತಾರೆ.
3 / 7
ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಕೂಡಾ, ತುಂಗಭದ್ರಾ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ಪಡೆಯೋ ರೈತರು ಪ್ರಮುಖವಾಗಿ ಭತ್ತವನ್ನೇ ಬೆಳೆಯುತ್ತಾರೆ. ಇನ್ನು ಇಲ್ಲಿನ ಭಾಗದಲ್ಲಿ ಬೆಳೆಯುವ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆ ಕೂಡಾ ಉತ್ತಮವಾಗಿ ಸಿಗುತ್ತದೆ.
4 / 7
ಕಳೆದ ವರ್ಷ ಬರಗಾಲದಿಂದಾಗಿ ಭತ್ತ ಬೆಳೆಯುವ ರೈತರು ಸಂಕಷ್ಟ ಅನುಭವಿಸಿದ್ದರು. ಎರಡನೇ ಬೆಳೆಗೆ ಡ್ಯಾಂ ನಿಂದ ನೀರು ಬಿಡದೇ ಇದ್ದಿದ್ದರಿಂದ ಕಂಗಾಲಾಗಿದ್ದರು. ಆದ್ರೆ ಈ ಬಾರಿ ಜುಲೈ ನಲ್ಲಿಯೇ ಡ್ಯಾಂ ಭರ್ತಿಯಾಗಿರುವುದು ರೈತರ ಸಂತಸವನ್ನು ಹೆಚ್ಚಿಸುತ್ತಿದೆ. ಇನ್ನು ಜುಲೈ ತಿಂಗಳು ಅಂತ್ಯಕ್ಕೆ ಬಂದಿದ್ದರು ಕೂಡಾ ಹೆಚ್ಚಿನ ರೈತರು ಭತ್ತವನ್ನು ನಾಟಿ ಮಾಡಿರಲಿಲ್ಲಾ. ಇದಕ್ಕೆ ಕಾರಣ, ಈ ಭಾಗದಲ್ಲಿ ನಿರೀಕ್ಷಿತ ಮಳೆಯಾಗದೇ ಇರೋದು ಮತ್ತು ಡ್ಯಾಂ ಖಾಲಿಯಾಗಿದ್ದು.
5 / 7
ಕಳೆದ ಹದಿನೈದು ದಿನಗಳಿಂದ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರ್ತಿದೆ. ಇದೇ ಕಾರಣಕ್ಕೆ ಡ್ಯಾಂ ನಿಂದ ನದಿಗೆ ಮತ್ತು ಕಾಲುವೆಗಳಿಗೆ ಜುಲೈ ತಿಂಗಳಲ್ಲಿಯೇ ನೀರು ಹರಿಸಲಾಗುತ್ತಿದೆ. ಕಾಲುವೆಗೆ ನೀರು ಹರಿಸುತ್ತಿದ್ದಂತೆ ಭತ್ತದ ರೈತರು ಖುಷಿಯಾಗಿದ್ದು, ಭತ್ತ ನಾಟಿಗೆ ಸಿದ್ದತೆ ಆರಂಭಿಸಿದ್ದಾರೆ. ಈಗಾಗಲೇ ಸಸಿಗಳನ್ನು ಬೆಳಸಿದ್ದು, ಕೆಲವು ರೈತರು ನಾಟಿ ಮಾಡಿದ್ದರೆ, ಇನ್ನು ಕೆಲವರು ನಾಟಿ ಮಾಡಲು ಸಿದ್ದವಾಗುತ್ತಿದ್ದಾರೆ.
6 / 7
ಇನ್ನೊಂದಡೆ ಎರಡನೇ ಬೆಳೆಗೆ ಕೂಡಾ ಈ ಬಾರಿ ಡ್ಯಾಂ ತುಂಬಿದ್ದರಿಂದ ನೀರು ಸಿಗುವ ವಿಶ್ವಾಸದಲ್ಲಿ ರೈತರು ಇದ್ದಾರೆ. ಇನ್ನು ಮಳೆಗಾಲ ಇರುವುದರಿಂದ ಈ ಬಾರಿ ಡ್ಯಾಂಗೆ ನಿರಂತರವಾಗಿ ನೀರು ಬರುವುದರಿಂದ, ಮೊದಲು ಮತ್ತು ಎರಡನೇ ಬೆಳೆಗೆ ನೀರನ್ನು ಯಾವುದೇ ತೊಂದರೆ ಇಲ್ಲದೇ ಬಿಡಬಹುದಾಗಿದೆ. ಹೀಗಾಗಿ ರೈತರ ಸಂತಸ ಹೆಚ್ಚಾಗಿದೆ.
7 / 7
ತುಂಗಭದ್ರಾ ಜಲಾಶಯ ತುಂಬಿದ್ರೆ ನಾಲ್ಕು ಜಿಲ್ಲೆಯ ಸಾವಿರಾರು ಭತ್ತದ ಬೆಳೆಗಾರರ ಕುಟುಂಬಗಳಿಗೆ ಸಂತಸ ದುಪ್ಪಟ್ಟಾಗುತ್ತದೆ. ಕಳೆದ ವರ್ಷ ಬರಗಾಲದಿಂದ ಸಂಕಷ್ಟ ಅನುಭವಿಸಿದ ಭತ್ತದ ಬೆಳೆಗಾರರಿಗೆ, ಈ ಬಾರಿ ಮಲೆನಾಡಿನ ಮಳೆ ಸಂತಸ ಮೂಡಿಸಿದೆ.