
ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಸಂದರ್ಭ ನಡೆದ ಮಾತುಕತೆಗಳಲ್ಲಿ ಯಶಸ್ವಿಯಾದ ಸಂಗತಿಗಳಲ್ಲಿ ಎಫ್-35 ಯುದ್ಧವಿಮಾನಗಳ ಮಾರಾಟ ವಿಚಾರವೂ ಒಂದು. ಭಾರತಕ್ಕೆ ಎಫ್-35 ಫೈಟರ್ಗಳನ್ನು ಕೊಡಲು ಒಪ್ಪಿರುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತಕ್ಕೆ ಎಫ್-22 ಕೊಡಲು ಇಚ್ಛಿಸಿದ್ದ ಅಮೆರಿಕ ಈಗ ಮನಸ್ಸು ಬದಲಾಯಿಸಿದಂತಿದೆ. ಇದು ಮೋದಿ ಮಾತುಕತೆಯ ಫಲಶ್ರುತಿಯಾ? ಮೋದಿ ಪ್ರಬಲ ಸಂಧಾನಕಾರ ಎಂದು ಟ್ರಂಪ್ ಹೇಳಿದ್ದು ಇದೇ ಕಾರಣಕ್ಕಿರಬಹುದು.

ಎಫ್-35 ಯುದ್ಧವಿಮಾನದಲ್ಲಿ ಅಂಥ ಶಕ್ತಿ ಏನಿದೆ? ಲಾಕ್ಹೀಡ್ ಮಾರ್ಟಿನ್ ಎನ್ನುವ ಅಮೆರಿಕನ್ ಖಾಸಗಿ ಸಂಸ್ಥೆಯು ಎಫ್-35 ಫೈಟರ್ ಜೆಟ್ಗಳನ್ನು ತಯಾರಿಸುತ್ತದೆ. ವಿಶ್ವದ ಕೆಲವೇ ಐದನೇ ತಲೆಮಾರಿನ ಫೈಟರ್ ಜೆಟ್ ವಿಮಾನಗಳಲ್ಲಿ ಇದೂ ಒಂದು. ಈ ಶ್ರೇಣಿಯಲ್ಲಿ ಫೈಟರ್ಗಳನ್ನು ಅಭಿವೃದ್ಧಿಪಡಿಸಿರುವುದು ಚೀನಾ ಮತ್ತು ರಷ್ಯಾ ಮಾತ್ರವೇ. ಚೀನಾ ಬಳಿ ಚೆಂಗ್ಡು ಜೆ-20 ಫೈಟರ್ ಜೆಟ್ ಇದೆ. ರಷ್ಯಾ ಬಳಿ ಸುಖೋಯ್ ಎಸ್ಯು-57 ಇದೆ.

ಪಾಕಿಸ್ತಾನ ಚೀನಾದಿಂದ ಜೆ20 ಫೈಟರ್ ಜೆಟ್ ಪಡೆಯಲು ಆಸಕ್ತಿ ಹೊಂದಿದೆ. ಚೀನಾ ಈ ಜೆಟ್ಗಳನ್ನು ಪಾಕಿಸ್ತಾನಕ್ಕೆ ಕೊಡಲೂ ಬಹುದು. ಇನ್ನೊಂದೆಡೆ, ರಷ್ಯಾ ತನ್ನ ಎಸ್ಯು57 ಅನ್ನು ಭಾರತಕ್ಕೆ ಕೊಡಲು ಸಿದ್ಧವಿದೆ. ಈಗ ಅಮೆರಿಕ ಕೂಡ ತನ್ನ ಎಫ್-35 ಜೆಟ್ಗಳನ್ನು ನೀಡಲು ಮುಂದೆ ಬಂದಿದೆ. ಹೀಗಾಗಿ, ಭಾರತಕ್ಕೆ ಎಸ್ಯು-57 ಮತ್ತು ಎಫ್-35 ಎಂಬ ಎರಡು ಆಯ್ಕೆಗಳಿವೆ. ಹೀಗಾಗಿ, ಭಾರತಕ್ಕೆ ಯಾವುದು ಸೂಕ್ತ, ಈ ಎರಡರಲ್ಲಿ ಯಾವುದು ಬಲಿಷ್ಠ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಕೆಲ ಅಂತಾರಾಷ್ಟ್ರೀಯ ಡಿಫೆನ್ಸ್ ತಜ್ಞರ ಪ್ರಕಾರ ಜೆ-20 ಮತ್ತು ಎಸ್ಯು-57 ಫೈಟರ್ ಜೆಟ್ಗಳು ಫಿಫ್ತ್ ಜನರೇಶನ್ ಯುದ್ಧವಿಮಾನಗಳಾಗಿದ್ದರೂ ಮತ್ತು ಉತ್ತಮ ಡಿಸೈನ್ ಹೊಂದಿದ್ದರೂ ತಾಂತ್ರಿಕವಾಗಿ ಎಫ್-35ನಷ್ಟು ಪಕ್ವವಾಗಿಲ್ಲ. ನೈಜ ಯುದ್ಧ ಸಂದರ್ಭದಲ್ಲಿ ಎಸ್ಯು-57 ಹಿನ್ನಡೆ ಹೊಂದಿರುವುದನ್ನು ಹಲವರು ಪತ್ತೆ ಮಾಡಿದ್ದಾರೆ. ಚೀನಾದ ಜೆ-20 ಫೈಟರ್ಗಳು ನೈಜ ಯುದ್ಧ ಸಂದರ್ಭದಲ್ಲಿ ಪ್ರಯೋಗ ಮಾಡಿಲ್ಲ.

ಅಮೆರಿಕದ ಎಫ್-35 ಅನ್ನು ಫ್ಲೈಯಿಂಗ್ ಕಂಪ್ಯೂಟರ್ ಎಂದೂ ಕರೆಯಲಾಗುತ್ತದೆ. ನ್ಯೂಕ್ಲಿಯಾರ್ ಬಾಂಬ್ ಹೊತ್ತೊಯ್ಯಬಲ್ಲ ವಿಶ್ವದ ಏಕೈಕ ಫಿಫ್ತ್ ಜನರೇಶನ್ ಫೈಟರ್ ಜೆಟ್ ಎಂದು ಅದನ್ನು ಪರಿಗಣಿಸಲಾಗಿದೆ. ಅನೇಕ ನೈಜ ಯುದ್ಧಗಳಲ್ಲಿ ಎಫ್-35 ಬಳಕೆ ಆಗಿದೆ. ಇಸ್ರೇಲ್ ದೇಶ ಇದನ್ನು ಅನೇಕ ಬಾರಿ ಯಶಸ್ವಿಯಾಗಿ ಉಪಯೋಗಿಸಿದೆ. ಕಂಪ್ಯೂಟರ್ ನಿಯಂತ್ರಣ ಇರುವುದರಿಂದ ಬಹಳ ಕರಾರುವಾಕ್ ದಾಳಿ ಸಂಯೋಜನೆಗೆ ಇದು ಹೇಳಿ ಮಾಡಿಸಿದ್ದಾಗಿದೆ.

ಭಾರತದಲ್ಲೂ ಐದನೇ ತಲೆಮಾರಿನ ಯುದ್ಧವಿಮಾನ ಅಭಿವೃದ್ಧಿಪಡಿಸುವ ಯೋಜನೆ ಇದೆ. ಆದರೆ, ಅದಿನ್ನೂ ನೆರವೇರಲು ಎರಡು ದಶಕಗಳೇ ಆಗಬಹುದು. ಪಾಕಿಸ್ತಾನಕ್ಕೆ ಚೀನಾದಿಂದ ಜೆ20 ಜೆಟ್ಗಳು ಯಾವಾಗ ಬೇಕಾದರೂ ಸಿಗಬಹುದು. ಹೀಗಾಗಿ, ಭಾರತದ ವಾಯುಪಡೆ ಬತ್ತಳಿಕೆಗೆ ಎಫ್-35 ಫೈಟರ್ಗಳ ಅವಶ್ಯಕತೆ ಬಹಳ ಇದೆ.