VHT 2025-26: ವರ್ಷದ ಕೊನೆಯ ದಿನ ಸಿಡಿದವು ಬರೋಬ್ಬರಿ 13 ಶತಕಗಳು
Vijay Hazare Trophy: ವಿಜಯ್ ಹಜಾರೆ ಟ್ರೋಫಿಯ ನಾಲ್ಕನೇ ಸುತ್ತಿನಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಮುಂದುವರಿದಿದ್ದು, 13 ಭರ್ಜರಿ ಶತಕಗಳು ದಾಖಲಾಗಿವೆ. ಸರ್ಫರಾಜ್ ಖಾನ್ 157 ರನ್, ದೇವದತ್ ಪಡಿಕ್ಕಲ್ 113 ರನ್ (ನಾಲ್ಕು ಪಂದ್ಯಗಳಲ್ಲಿ 3ನೇ ಶತಕ), ರುತುರಾಜ್ ಗಾಯಕ್ವಾಡ್ 124, ಕೃನಾಲ್ ಪಾಂಡ್ಯ 109 ರನ್ ಗಳಿಸಿ ಮಿಂಚಿದ್ದಾರೆ. ಮಯಾಂಕ್ ಅಗರ್ವಾಲ್ ಸಹ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.
Updated on:Jan 01, 2026 | 4:32 PM

ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಮುಂದುವರೆದಿದೆ. ಟೂರ್ನಿಯ ಮೊದಲ ಪಂದ್ಯದಿಂದಲೂ ಶತಕಗಳ ಸರಮಾಲೆ ಸೃಷ್ಟಿಯಾಗಿದೆ. ಇದೀಗ ಈ ಟೂರ್ನಿಯ ನಾಲ್ಕನೇ ಸುತ್ತಿನಲ್ಲೂ ಬ್ಯಾಟ್ಸ್ಮನ್ಗಳಿಂದ ಸ್ಫೋಟಕ ಶತಕಗಳು ಸಿಡಿದಿವೆ. ಡಿಸೆಂಬರ್ 31 ರಂದು ನಡೆದ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಒಟ್ಟು 13 ಬ್ಯಾಟ್ಸ್‌ಮನ್‌ಗಳು ಶತಕಗಳಬ ಬಾರಿಸಿದ್ದಾರೆ. ಇದರಲ್ಲಿ ಇಬ್ಬರು ಆಟಗಾರರು 150 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯ ನಾಲ್ಕನೇ ಸುತ್ತಿನಲ್ಲಿ ಮುಂಬೈ ಪರ ಆಡುತ್ತಿರುವ ಅನುಭವಿ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಗೋವಾ ವಿರುದ್ಧ 75 ಎಸೆತಗಳಲ್ಲಿ 157 ರನ್ ಗಳಿಸುವ ಮೂಲಕ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಛತ್ತೀಸ್‌ಗಢದ ವಿಕಲ್ಪ್ ತಿವಾರಿ ಕೂಡ ಸಿಕ್ಕಿಂ ವಿರುದ್ಧ 112 ರನ್ ಬಾರಿಸಿದರು.

ರುತುರಾಜ್ ಗಾಯಕ್ವಾಡ್ ಮತ್ತು ಕೃನಾಲ್ ಪಾಂಡ್ಯ ಕೂಡ ಶತಕ ಸಿಡಿಸಿದರು. ಉತ್ತರಾಖಂಡ್ ವಿರುದ್ಧ ಗಾಯಕ್ವಾಡ್ 124 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರೆ, ಹೈದರಾಬಾದ್ ವಿರುದ್ಧ ಕೃನಾಲ್ ಪಾಂಡ್ಯ 63 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದರು. ಹರಿಯಾಣದ ಬ್ಯಾಟ್ಸ್‌ಮನ್ ಅಂಕಿತ್ ಕುಮಾರ್ 123 ಎಸೆತಗಳಲ್ಲಿ ಅಜೇಯ 144 ರನ್ ಗಳಿಸಿದರೆ, ಜಾರ್ಖಂಡ್‌ನ ಉತ್ಕರ್ಷ್ ಸಿಂಗ್ ತಮಿಳುನಾಡು ವಿರುದ್ಧ ಅಜೇಯ 123 ರನ್ ಗಳಿಸಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ದೇವದತ್ ಪಡಿಕ್ಕಲ್ ಅವರ ಅದ್ಭುತ ಪ್ರದರ್ಶನ ಮುಂದುವರೆದಿದ್ದು, ಈ ಎಡಗೈ ಬ್ಯಾಟ್ಸ್‌ಮನ್ ಪುದುಚೇರಿ ವಿರುದ್ಧ 116 ಎಸೆತಗಳಲ್ಲಿ 113 ರನ್ ಗಳಿಸಿದರು, ಇದು ನಾಲ್ಕು ಪಂದ್ಯಗಳಲ್ಲಿ ಅವರ ಮೂರನೇ ಶತಕವಾಗಿದೆ. ಮಯಾಂಕ್ ಅಗರ್ವಾಲ್ ಕೂಡ 132 ರನ್ ಬಾರಿಸಿದರು. ಉತ್ತರ ಪ್ರದೇಶದ ಬ್ಯಾಟ್ಸ್‌ಮನ್ ಆರ್ಯನ್ ಜುಯಾಲ್ ಅಸ್ಸಾಂ ವಿರುದ್ಧ ಅಜೇಯ 150 ರನ್ ಸಿಡಿಸಿದರು.

ಕೇರಳದ ಬ್ಯಾಟ್ಸ್‌ಮನ್ ಬಾಬಾ ಅಪರಾಜಿತ್ ಕೂಡ ರಾಜಸ್ಥಾನ ವಿರುದ್ಧ 126 ಇನ್ನಿಂಗ್ಸ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರಾಜಸ್ಥಾನದ ಕರಣ್ ಲಂಬಾ ಕೂಡ ಅದ್ಭುತ 119 ರನ್ಗಳ ಇನ್ನಿಂಗ್ಸ್ ಆಡಿದರು. ಮಧ್ಯಪ್ರದೇಶದ ಬ್ಯಾಟ್ಸ್‌ಮನ್ ಯಶ್ ದುಬೆ ತ್ರಿಪುರ ವಿರುದ್ಧ 105 ರನ್ ಗಳಿಸಿದರೆ, ಗೋವಾ ಬ್ಯಾಟ್ಸ್‌ಮನ್ ಅಭಿನವ್ ತೇಜ್ರಾನಾ ಕೂಡ ಮುಂಬೈ ವಿರುದ್ಧ ಶತಕ ಗಳಿಸಿದರು. ಅಸ್ಸಾಂನ ಸುಮಿತ್ ಘಡಿಗಾಂವ್ಕರ್ 101 ರನ್ಗಳ ಇನ್ನಿಂಗ್ಸ್ ಆಡಿದರು.
Published On - 4:31 pm, Thu, 1 January 26
