
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೂಕದ ವಿಚಾರದಿಂದಾಗಿ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾದ ನಿರಾಶೆಯಿಂದ ಈ ಆಘಾತಕ್ಕಾರಿ ನಿರ್ಧಾರ ತೆಗೆದುಕೊಂಡಿದ್ದ ವಿನೇಶ್ ಫೋಗಟ್ ಇದೀಗ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಮತ್ತೊಮ್ಮೆ ಕುಸ್ತಿ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ಹೇಳಿಕೆ ನೀಡಿರುವ ವಿನೇಶ್ ಫೋಗಟ್, ತನ್ನ ಗಮನ ಏನಿದ್ದರೂ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲೆ ಇರಲಿದೆ ಎಂದಿದ್ದಾರೆ. ವಾಸ್ತವವಾಗಿ ಇದೇ ವರ್ಷದ ಆಗಸ್ಟ್‌ನಲ್ಲಿ ಕ್ರೀಡೆಯಿಂದ ದೂರ ಸರಿದು ರಾಜಕೀಯಕ್ಕೆ ಪ್ರವೇಶಿಸಿದ್ದ ವಿನೇಶ್ ಫೋಗಟ್, ಇದೀಗ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ವಿನೇಶ್ ಫೋಗಟ್, ‘ಜನರು ಪ್ಯಾರಿಸ್ ಒಲಿಂಪಿಕ್ಸ್ ನನ್ನ ಕೊನೆಯ ಪ್ರವಾಸವೇ ಎಂದು ನನ್ನನ್ನು ಆಗಾಗ್ಗೆ ಕೇಳುತ್ತಾರೆ? ಆ ಪ್ರಶ್ನೆಗೆ ನನ್ನಲ್ಲಿ ಬಹಳ ಸಮಯದಿಂದ ಉತ್ತರವಿರಲಿಲ್ಲ. ನಾನು ಅಖಾಡ, ಒತ್ತಡ, ನಿರೀಕ್ಷೆಗಳು ಮತ್ತು ನನ್ನ ಕನಸುಗಳಿಂದ ದೂರ ಸರಿಯಬೇಕಾಯಿತು. ವರ್ಷಗಳಲ್ಲಿ ಮೊದಲ ಬಾರಿಗೆ, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ನನ್ನ ಕೆಲಸದ ಹೊರೆ, ಜೀವನದ ಏರಿಳಿತಗಳು, ತ್ಯಾಗಗಳು, ಜಗತ್ತು ಎಂದಿಗೂ ನೋಡದ ನನ್ನ ಮತ್ತೊಂದು ಮಜಲನ್ನು ಅರ್ಥಮಾಡಿಕೊಳ್ಳಲು ನಾನು ಸ್ವಲ್ಪ ಸಮಯ ತೆಗೆದುಕೊಂಡೆ. ನಾನು ಇನ್ನೂ ಕ್ರೀಡೆಯನ್ನು ಪ್ರೀತಿಸುತ್ತೇನೆ. ನಾನು ಇನ್ನೂ ಸ್ಪರ್ಧಿಸಲು ಬಯಸುತ್ತೇನೆ. ಮೌನದಲ್ಲಿ, ನಾನು ಮರೆತಿದ್ದ ಒಂದು ವಿಷಯವನ್ನು ನಾನು ಕಂಡುಕೊಂಡೆ. ‘ಬೆಂಕಿ ಎಂದಿಗೂ ಆರುವುದಿಲ್ಲ.' ಅದು ಆಯಾಸ ಮತ್ತು ಶಬ್ದದ ಕೆಳಗೆ ಹೂತುಹೋಗಿತ್ತು.

ಶಿಸ್ತು, ದಿನಚರಿ, ಹೋರಾಟ... ಅದು ನನ್ನ ಬದುಕಿನಲ್ಲಿ ಬೇರೂರಿದೆ. ನಾನು ಎಷ್ಟೇ ದೂರ ಹೋದರೂ, ನನ್ನ ಒಂದು ಭಾಗವು ಅಖಾಡದ ಮೇಲೆಯೇ ಉಳಿದಿದೆ. ಹಾಗಾಗಿ ಇಲ್ಲಿ ನಾನು, ನಿರ್ಭೀತ ಹೃದಯ ಮತ್ತು ಯಾರಿಗೂ ಬಗ್ಗದ ಮನೋಭಾವದೊಂದಿಗೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತಯಾರಿ ನಡೆಸಲಿದ್ದೇನೆ. ಈ ಬಾರಿ ನನ್ನ ಬೆಂಬಲಕ್ಕೆ ನನ್ನ ಮಗ ಕೂಡ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ.

ವಾಸ್ತವವಾಗಿ ಪ್ಯಾರಿಸ್ ಒಲಿಂಪಿಕ್ಸ್ ವಿನೇಶ್ ಫೋಗಟ್ಗೆ ದುಃಸ್ವಪ್ನವಾಗಿ ಕಾಡಿತ್ತು. ವಿನೇಶ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದಾಗ್ಯೂ, ಫೈನಲ್‌ಗೆ ಕೆಲವೇ ಗಂಟೆಗಳ ಮೊದಲು, ಅವರು ಅಧಿಕ ತೂಕ ಹೊಂದಿರುವುದು ಪತ್ತೆಯಾದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ಇದರ ಪರಿಣಾಮವಾಗಿ ಅವರಿಗೆ ಧಕ್ಕಬೇಕಿದ್ದ ಪದಕ ಸಿಗಲಿಲ್ಲ. ವಿನೇಶ್ ಈ ಹಿಂದೆ ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು, ಆದರೆ ಪದಕ ಗೆಲ್ಲಲು ವಿಫಲರಾಗಿದ್ದರು.