- Kannada News Photo gallery Cricket photos Vaibhav Suryavanshi breaks world record in U19 Asia Cup 2025
ವೈಭವ್ ಸೂರ್ಯವಂಶಿ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್
India U19 vs United Arab Emirates U19: ಅಂಡರ್-19 ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಭಾರತ ತಂಡ 50 ಓವರ್ಗಳಲ್ಲಿ 433 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡವು 199 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 234 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Dec 13, 2025 | 7:56 AM

ವೈಟ್ ಬಾಲ್ ಕ್ರಿಕೆಟ್ ನಲ್ಲಿ ಯುವ ದಾಂಡಿಗ ವೈಭವ್ ಸೂರ್ಯವಂಶಿ (Vaibhav Suryavanshi) ಆರ್ಭಟ ಮುಂದುವರೆದಿದೆ. ಇಷ್ಟು ದಿನ ಟಿ೨೦ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿದ್ದ ವೈಭವ್ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಲಬ್ಬರ ಶುರು ಮಾಡಿದ್ದಾರೆ. ಈ ಸಿಡಿಲಬ್ಬರದೊಂದಿಗೆ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಶತಕ ಸಿಡಿಸಿದ್ದಾರೆ. ಯುಎಇ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲ ಓವರ್‌ನಿಂದಲೇ ಯುಎಇ ಬೌಲರ್‌ಗಳ ಬೆಂಡೆತ್ತಲು ಆರಂಭಿಸಿದ ವೈಭವ್ ಸೂರ್ಯವಂಶಿ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಯುವ ದಾಂಡಿಗ 95 ಎಸೆತಗಳಲ್ಲಿ 14 ಭರ್ಜರಿ ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 171 ರನ್ ಬಾರಿಸಿದರು.

ಈ 14 ಸಿಕ್ಸರ್ ಗಳೊಂದಿಗೆ ಅಂಡರ್- 19 ಏಕದಿನ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಯೂತ್ ಒಡಿಐ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ದಾಂಡಿಗ ಮೈಕೆಲ್ ಹಿಲ್ ಹೆಸರಿನಲ್ಲಿತ್ತು.

2008 ರಲ್ಲಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮೈಕೆಲ್ ಹಿಲ್ ಬರೋಬ್ಬರಿ 12 ಸಿಕ್ಸ್ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.

ಯುಎಇ ವಿರುದ್ಧ ಬರೋಬ್ಬರಿ 14 ಸಿಕ್ಸ್ ಸಿಡಿಸಿ ವೈಭವ್ ಸೂರ್ಯವಂಶಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಯೂತ್ ಒಡಿಐ ಪಂದ್ಯದಲ್ಲಿ 2 ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವೈಭವ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 10 ಸಿಕ್ಸ್ ಬಾರಿಸಿದ್ದರು. ಇದೀಗ 14 ಸಿಕ್ಸರ್ ಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.
