
ಪಶ್ಚಿಮ ಬಂಗಾಳದಲ್ಲಿ ಪ್ರವಾಹಕ್ಕೆ ತತ್ತರಿಸಿರುವ ಘಾಟಲ್, ಪಶ್ಚಿಮ ಮೇದಿನಿಪುರಗಳಿಗೆ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಅಧಿಕಾರಿಗಳೊಟ್ಟಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಪರಿಶೀಲನೆ ಮಾಡಿದರು. ರಸ್ತೆಗಳ ಮೇಲೆಲ್ಲ ನೀರು ತುಂಬಿದ್ದನ್ನು ಪರಿಶೀಲನೆ ಮಾಡಿದರು. ಡಿವಿಸಿ ವ್ಯಾಲಿಯ ಅಣೆಕಟ್ಟುಗಳಿಂದ ಹೆಚ್ಚು ಪ್ರಮಾಣದಲ್ಲಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಮಳೆ ನಿಂತಿದ್ದರೂ ಪ್ರವಾಹ ಮುಂದುವರಿದಿದೆ.

ಇಂದು ಪ್ರವಾಹ ಪೀಡಿತ ಪ್ರದೇಶಗಳಾದ ಪಶ್ಚಿಮ ಮೇದಿನಿಪುರ ಮತ್ತು ಘಾಟಲ್ಗಳಿಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಅವರ ಕಷ್ಟವನ್ನು ಕಣ್ಣಾರೆ ನೋಡಿದರು. ಏನೆಲ್ಲ ಅಗತ್ಯತೆಗಳಿವೆ ಎಂದು ಕೇಳುವುದರೊಂದಿಗೆ, ಧೈರ್ಯವಾಗಿರುವಂತೆ ಭರವಸೆ ನೀಡಿದರು. ಪಶ್ಚಿಮ ಬಂಗಾಳದಲ್ಲಿ ಸುಮಾರು 7 ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಒಟ್ಟು 23 ಮಂದಿ ಮೃತಪಟ್ಟಿದ್ದಾರೆ.

ಮೊಯ್ರಾಪುಕರ್ನಲ್ಲಿ ಹೆಲಿಕಾಪ್ಟರ್ ಇಳಿದ ಮಮತಾ ಬ್ಯಾನರ್ಜಿ ಅಲ್ಲಿಂದ, ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ. ಜಲಾವೃತಗೊಂಡ ರಸ್ತೆಯುದ್ದಕ್ಕೂ ಇನ್ನಿಬ್ಬರು ಅಧಿಕಾರಿಗಳೊಂದಿಗೆ ಹೆಜ್ಜೆ ಹಾಕಿದ ಮಮತಾ ಬ್ಯಾನರ್ಜಿ, ಅಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಇದು ಮಾನವ ನಿರ್ಮಿತ ಪ್ರವಾಹ ಆಗಿದೆ. ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.

ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಆಶ್ರಯಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಅಲ್ಲಿಗೆ ತೆರಳಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲ್ಲಿದ್ದವರಿಗೆ ಆಹಾರ ವಿತರಣೆ ಮಾಡಿದರು. ಇನ್ನು ಅಪಾರ ನೀರಿನಂದಾಗಿ ಮನೆಯಲ್ಲಿಯೇ ಸಿಕ್ಕಿಬಿದ್ದಿರುವ ನಾಗರಿಕರಿಗೂ ಮಮತಾ ಬ್ಯಾನರ್ಜಿ ಆಹಾರ ವಿತರಣೆ ಮಾಡಿದ್ದಾರೆ.

ಘಾಟಲ್ ಮತ್ತು ಪಶ್ಚಿಮ ಮೇದಿನಿಪುರಗಳಲ್ಲಿ ರಸ್ತೆಗಳ ಮೇಲೆ ಮೊಣಕಾಲು ಮಟ್ಟದ ನೀರು ನಿಂತಿದ್ದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದನ್ನೆಲ್ಲ ಲೆಕ್ಕಿಸದೆ, ತಾವು ಉಟ್ಟಿದ್ದ ಸೀರೆಯನ್ನು ಮೇಲಕ್ಕೆ ಎತ್ತಿ ಹಿಡಿದು ಕಾಲ್ನಡಿಗೆಯಲ್ಲೇ ಸಂಚರಿಸಿದರು. ಅವರ ಜತೆ ಪೊಲೀಸ್ ಅಧಿಕಾರಿ ಹಾಗೂ ಸ್ಥಳೀಯ ಅಧಿಕಾರಿಯಿದ್ದರು.

ಘಾಟಲ್ನಲ್ಲಿ ಪ್ರವಾಹ ಪರಿಸ್ಥಿತಿಯಿಂದ ರಸ್ತೆಯಲ್ಲಿ ಹೊಳೆಯಂತೆ ನೀರು ತುಂಬಿದೆ. ಸುತ್ತಲಿನ ಮನೆಗಳಲ್ಲಿ ಸಿಲುಕಿರುವ ಜನರನ್ನು ದೋಣಿ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲಾಯಿತು.
Published On - 4:43 pm, Tue, 10 August 21