
ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್ನಲ್ಲಿ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಸಿಂಗಾಪುರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಶಿಪ್‌ನ 11 ನೇ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಿದ ಗುಕೇಶ್, ಡಿಂಗ್ ಅವರನ್ನು 29 ನಡೆಗಳಲ್ಲಿ ಸೋಲಿಸಿ ಪ್ರಶಸ್ತಿ ರೇಸ್‌ನಲ್ಲಿ 1 ಪಾಯಿಂಟ್‌ನಿಂದ ಮುನ್ನಡೆ ಸಾಧಿಸಿದ್ದಾರೆ.

ಇದಕ್ಕೂ ಮೊದಲು ಗುಕೇಶ್ ಮತ್ತು ಲಿರೆನ್ ನಡುವೆ ಸತತ ಏಳು ಗೇಮ್ಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಆದರೆ ಭಾರತೀಯ ಗ್ರ್ಯಾಂಡ್ ಮಾಸ್ಟರ್, ಲಿರೆನ್ ಅವರ ತಪ್ಪಿನ ಲಾಭವನ್ನು ಪಡೆದು ಚೀನಾದ ಪ್ರತಿಸ್ಪರ್ಧಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

ಇಬ್ಬರು ಆಟಗಾರರ ನಡುವಿನ ಒಟ್ಟು 11 ಗೇಮ್ಗಳಲ್ಲಿ ಎಂಟು ಗೇಮ್ಗಳು ಡ್ರಾ ಆಗಿವೆ. ಉಳಿದಂತೆ ಎರಡು ಗೇಮ್ಗಳಲ್ಲಿ ಗುಕೇಶ್ ಗೆಲುವು ಸಾಧಿಸಿದ್ದರೆ, ಚೀನಾದ ಲಿರೆನ್ ಇದುವರೆಗೆ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಉಭಯ ಆಟಗಾರರು ಕ್ರಮವಾಗಿ 6 ಮತ್ತು 5 ಅಂಕ ಸಂಪಾಧಿಸಿದ್ದಾರೆ.

ಕೇವಲ 18 ವರ್ಷ ವಯಸ್ಸಿನ ಗುಕೇಶ್ ಅವರು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆಗುವ ಅವಕಾಶವನ್ನು ಹೊಂದಿದ್ದು, ಉಳಿದಿರುವ 3 ಗೇಮ್ಗಳಲ್ಲಿ ಗುಕೇಶ್ 1 ಪಂದ್ಯವನ್ನು ಗೆದ್ದು ಉಳಿದ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅವರಿಗೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಸಿಗಲಿದೆ.
Published On - 8:03 pm, Sun, 8 December 24