ಮಂಡ್ಯ: ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇದರ ಮಧ್ಯೆ ನಾಯಕರು ಹಾಗೂ ಕಾರ್ಯಕರ್ತರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರ ಸಹ ಜೋರಾಗಿದೆ. ಅದರಲ್ಲೂ ಜೆಡಿಎಸ್ನ (JDS) ಭದ್ರಕೋಟೆ ಮಂಡ್ಯದಲ್ಲಿ(Mandya) ಮುಖಂಡರು ಹಾಗೂ ಕಾರ್ಯಕರ್ತರು ತೆನೆ ಇಳಿಸಿ ಕೈ ಹಿಡಿದಿದ್ದಾರೆ. ಹೌದು.. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಭೇಟಿ ಬೆನ್ನಲ್ಲೇ ಮುಖಡರು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 200 ಜನರು ಇಂದು(ಮಾರ್ಚ್ 19( ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ.ದೇವೇಗೌಡ ರೋಡ್‌ಶೋ ರದ್ದು: ಹೆಚ್ಡಿ ಕುಮಾರಸ್ವಾಮಿ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಒಟ್ಟು 200 ಜನರು ಕಾಂಗ್ರೆಸ್ ಸೇರ್ಪಡೆಯಾದರು. ಮಾಜಿ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಜೆಡಿಎಸ್ ಮುಖಂಡರಾದ ಸಿ. ಸ್ವಾಮಿಗೌಡ, ಡಿ.ಎಂ. ರವಿ ಮೊದಲದಾವರು ಶ್ರಿರಂಗಪಟ್ಟಣದ ಖಾಸಗಿ ಸಭಾಭವನದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಚುನಾವಣೆ ಹೊತ್ತಲ್ಲಿ ಸಾಲು-ಸಾಲು ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯುತ್ತಿರುವುದು ದಳಪತಿಗಳಿಗೆ ಚಿಂತೆಗೀಡುಮಾಡಿದೆ.
2018ರ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿರುವ ರವೀಂದ್ರ ಶ್ರೀಕಂಠಯ್ಯನವರು ಮತ್ತೊಮ್ಮೆ ಚುನಾವಣೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಜೆಡಿಎಸ್ ಟಿಕೆಟ್ ಪಕ್ಕಾ ಮಾಡಿಕೊಂಡಿರುವ ರವೀಂದ್ರ ಶ್ರೀಕಂಠಯ್ಯನವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಕಳೆದ ಬಾರಿ ಇದ್ದ ಜೆಡಿಎಸ್ ಪಕ್ಷದ ಪರವಾಗಿನ ಒಕ್ಕಲಿಗರ ಅಲೆ ಈ ಬಾರಿ ಕಂಡುಬರುತ್ತಿಲ್ಲ. ಹಾಗಾಗಿ ಅವರು ತಮ್ಮ ಸಾಂಪ್ರದಾಯಕ ಎದುರಾಳಿ ರಮೇಶ್ ಬಾಬು ಬಂಡಿಸಿದ್ಧೇಗೌಡರು ಎದುರು ಗೆಲ್ಲಲು ತಿಣುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಮಾಜಿ ಜಿ.ಪಂ ಅಧ್ಯಕ್ಷರಾದ ತಗ್ಗಹಳ್ಳಿ ವೆಂಕಟೇಶ್ ತನಗೆ ಜೆಡಿಎಸ್ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ.
ರಾಜಕೀಯ ಸುದ್ದುಗಾಗಿ ಇಲ್ಲಿ ಕ್ಲಿಕ್ಕಿಸಿ