ನಿಮ್ಮ ಅವಧಿಯಲ್ಲಿ 25ನೇ ತಾರೀಕಿನವರೆಗೂ ವೇತನ ನೀಡಿರಲಿಲ್ಲ: ಬೊಮ್ಮಾಯಿಗೆ ರಾಮಲಿಂಗಾರೆಡ್ಡಿ ತಿರುಗೇಟು

| Updated By: Rakesh Nayak Manchi

Updated on: Aug 03, 2023 | 9:02 PM

ಕಡಿಮೆ ಅನುದಾನದಿಂದ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳವೆಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಜನರಿಗೆ ತಪ್ಪು ಮಾಹಿತಿ ನೀಡದಿರಿ ಎಂದು ಹೇಳಿದ್ದಾರೆ.

ನಿಮ್ಮ ಅವಧಿಯಲ್ಲಿ 25ನೇ ತಾರೀಕಿನವರೆಗೂ ವೇತನ ನೀಡಿರಲಿಲ್ಲ: ಬೊಮ್ಮಾಯಿಗೆ ರಾಮಲಿಂಗಾರೆಡ್ಡಿ ತಿರುಗೇಟು
ರಾಮಲಿಂಗಾರೆಡ್ಡಿ ಮತ್ತು ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು, ಆಗಸ್ಟ್ 3: ಎಲ್ಲಾ ಸಿಬ್ಬಂದಿಗೆ 1ನೇ ತಾರೀಕಿನಂದೇ ಪೂರ್ತಿ ಸಂಬಳವಾಗುತ್ತದೆ. ​ಜನರಿಗೆ ತಪ್ಪು ಮಾಹಿತಿ ನೀಡದಿರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ. ಕಡಿಮೆ ಅನುದಾನದಿಂದ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳವೆಂದು ಬೊಮ್ಮಾಯಿ ಟ್ವೀಟ್​ಗೆ ಸಚಿವರು ರೀಟ್ವೀಟ್ ಮೂಲಕ ತಿರುಗೇಟು ನೀಡಿದರು.

ಬೊಮ್ಮಾಯಿ ಮತ್ತು ರಾಮಲಿಂಗಾರೆಡ್ಡಿ ನಡುವೆ ನಿನ್ನೆಯಿಂದ ಟ್ವೀಟ್ ವಾರ್ ನಡೆಯುತ್ತಿದೆ. ಸರ್ಕಾರದ ಕಡಿಮೆ ಅನುದಾನದಿಂದ ಸಾರಿಗೆ ನೌಕರರಿಗೆ ಅರ್ಧ ಸಂಬಳ ಎಂದು ಬೊಮ್ಮಾಯಿ ಅವರು ಟ್ವೀಟ್ ‌ಮಾಡಿದ್ದರು. ಇದಕ್ಕೆ ರಾಮಲಿಂಗಾರೆಡ್ಡಿ, ಎಲ್ಲ ನೌಕರರಿಗೂ ಒಂದನೇ ತಾರೀಕಿನಂದೆ ಪೂರ್ತಿ ಸಂಬಳ ಎಂದು ರೀಟ್ವೀಟ್ ಮಾಡಿದ್ದರು.

ಇಂದು ಮತ್ತೆ ಟ್ವೀಟ್ ಮಾಡಿದ ರಾಮಲಿಂಗಾರೆಡ್ಡಿ, ಜನರಿಗೆ ತಪ್ಪು ಮಾಹಿತಿ‌ನೀಡದಿರಿ ಎಂದಿದ್ದಾರೆ. “ಬೊಮ್ಮಾಯಿ ಅವರೇ ನಿನ್ನೆ ಸಾರಿಗೆ ಸಿಬ್ಬಂದಿಗಳಿಗೆ ಅರ್ಧ ವೇತನ ಪಾವತಿ, ಇಂದು ಅರ್ಧದಷ್ಟು ಅನುದಾನ ಎಂದು ಹೇಳುತ್ತಿರುವಿರಿ. ಸಾರಿಗೆ ಇಲಾಖೆ ಆದೇಶದಲ್ಲಿ Ad-hoc ಆಧಾರದಲ್ಲಿ ಎಂದು ನಮೂದಿಸಲಾಗಿದ್ದು, ಎಲ್ಲಿಯೂ ಕೂಡ ಅರ್ಧದಷ್ಟು ಅನುದಾನ ಮಂಜೂರು ಎಂದು ನಮೂದಾಗಿಲ್ಲ. ತಾವು ಆದೇಶದ ಪ್ರತಿಯನ್ನು ಮತ್ತೊಮ್ಮೆ ಅವಗಾಹಿಸುವುದು. ತಮ್ಮ ಆಡಳಿತದ ಅವಧಿಯಲ್ಲಿ, ಸಾರಿಗೆ ಸಿಬ್ಬಂದಿಗಳಿಗೆ ತಿಂಗಳ ವೇತನವನ್ನು 25 ನೇ ದಿನಾಂಕದವರೆಗೂ ಹಾಗೂ ಈ ತಿಂಗಳ ವೇತನವನ್ನು ಮುಂದಿನ ತಿಂಗಳು ನೀಡಿರುವಂತಹ ಉದಾಹರಣೆಗಳು ಸಹ ಇವೆ. ತಾವು ಸಾರಿಗೆ ಸಿಬ್ಬಂದಿಗಳೆಡೆಗೆ ತೋರಿದ ಕಾಳಜಿಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ” ಎಂದರು.

ಇದನ್ನೂ ಓದಿ: ಶಕ್ತಿ ಯೋಜನೆ ಅಡ್ಡ ಪರಿಣಾಮ, ಕುಂಟುತ್ತಿದೆ ವಾಯವ್ಯ ಸಾರಿಗೆ ಸಂಸ್ಥೆ ಆದಾಯ: ಸಂಬಳ ಕೊಡಲು ಆರ್ಥಿಕ ನೆರವು ಬೇಕಿದೆ- ಸರ್ಕಾರಕ್ಕೆ ಎಂಡಿ ಪತ್ರ

ಬಸವರಾಜ ಬೊಮ್ಮಾಯಿ ಟ್ವೀಟ್​ನಲ್ಲೇನಿತ್ತು?

“ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರೇ ಶಕ್ತಿ ಯೋಜನೆ ಅಡಿ ರಾಜ್ಯದಲ್ಲಿ ಮಹಿಳೆಯರು ಸಾರಿಗೆ ನಿಗಮದ ಬಸ್​ಗಳಲ್ಲಿ ಜೂನ್ ತಿಂಗಳಲ್ಲಿ 20 ದಿನ ಉಚಿತ ಪ್ರಯಾಣ ಮಾಡಿರುವುದರಿಂದ ನಾಲ್ಕು ಸಾರಿಗೆ ನಿಗಮಗಳಿಗೆ 250 ಕೋಟಿ ರೂ. ವೆಚ್ಚವಾಗಿದ್ದು, ಪ್ರಯಾಣ ವೆಚ್ಚದ ಮರುಪಾವತಿ ಮಾಡಲು ನಾಲ್ಕೂ ನಿಗಮಗಳಿಗೆ ಆಗಸ್ಟ್ 1 ರಂದು 125 ಕೋಟಿ ಬಿಡುಗಡೆ ಮಾಡಿ ನಿಮ್ಮದೇ ಇಲಾಖೆ ಆದೇಶ ಮಾಡಿದೆ” ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದರು.

“ಸಾರಿಗೆ ನಿಗಮಗಳ ಬೇಡಿಕೆಗೂ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಕ್ಕೂ ಅರ್ಧದಷ್ಟು ಕಡಿಮೆ ಇದ್ದು, ಹೀಗಿರುವಾಗ ಮೊದಲೇ ನಷ್ಟದಲ್ಲಿ ನಡೆಯುತ್ತಿರುವ ಸಾರಿಗೆ ನಿಗಮಗಳಿಗೆ ಸಿಬ್ಬಂದಿ ಸಂಬಳ, ಬಸ್​ಗಳ ನಿರ್ವಹಣೆ, ಡಿಸೇಲ್​ಗೆ ಹಣದ ಕೊರತೆಯಾಗುವುದು ವಾಸ್ತವಿಕ ಸತ್ಯ” ಎಂದು ಟ್ವೀಟ್ ಮಾಡಿದ್ದರು.

“ನಿಮ್ಮ ಇಲಾಖೆಯ ಆದೇಶ ನೋಡಿಯೇ ರಾಜ್ಯದ ಜನತೆಗೆ ಸತ್ಯ ಹೇಳುವ ಕೆಲಸ ಮಾಡಿದ್ದೇನೆ. ಜನರ ದಾರಿ ತಪ್ಪಿಸಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ. ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗದೇ, ನಮ್ಮ ಅವಧಿಯಲ್ಲಿ ಸೇರ್ಪಡೆಗೊಂಡ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಿದ್ದೀರಿ, ತಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಆಗಿಲ್ಲ” ಎಂದರು.

“16000 ಸಿಬ್ಬಂದಿಗಳ ಕೊರತೆಯನ್ನು ಸಾರಿಗೆ ಸಂಸ್ಥೆಗಳು ಅನುಭವಿಸುತ್ತಿದ್ದು, ನಾವು 13000 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ತಮ್ಮ ಅವಧಿಯಲ್ಲಿ ಬಿಎಂಟಿಸಿ ಹೊರತುಪಡಿಸಿ ಇತರೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಕರ ಅವಶ್ಯಕತೆಗೆ ತಕ್ಕಂತೆ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ, 2022-2023 ರ ಆರ್ಥಿಕ ವರ್ಷದ ಅವಧಿಗೆ ನಾಲ್ಕೂ ಸಾರಿಗೆ ಸಂಸ್ಥೆಗಳ ಸಾರಿಗೆ ಆದಾಯದ ಮೇಲಿನ ನಷ್ಟ do. 4330.41 3. ಇದು ತಮ್ಮ ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ” ಎಂದು ಟ್ವೀಟ್ ಮಾಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Thu, 3 August 23