ಮೊದಲಿದ್ದ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದರಾಮಯ್ಯ ಬೇರೆ: ಬಸವರಾಜ ಬೊಮ್ಮಾಯಿ
ಕರ್ನಾಟಕದ ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಸಚಿವರನ್ನು ಕರೆಸಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಸಿತ್ತು. ಆಡಳಿತ ವ್ಯವಸ್ಥೆಯಲ್ಲಿ ಸುಪ್ರೀಂ ಆಗಿರುವ ಸಂಪುಟವನ್ನೇ ಅಲ್ಲಿಗೆ ಕರೆದುಕೊಂಡು ಹೋಗಿರುವುದು ಎಷ್ಟು ಸರಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಬೆಂಗಳೂರು, ಆಗಸ್ಟ್ 3: ಮೊದಲಿದ್ದ ಸಿದ್ದರಾಮಯ್ಯ (Siddaramaiah) ಬೇರೆ, ಈಗಿನ ಸಿದ್ದರಾಮಯ್ಯವೇ ಬೇರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠರ ಬಳಿ ತಲೆ ಬಾಗಿರುವುದು ಬಹಳ ವಿರಳ. ಆದರೆ ಈಗ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ. ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳುತ್ತಿಲ್ಲ. ಕಾಂಗ್ರೆಸ್ ವರಿಷ್ಠರ ಮಾತನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ನ ಹಸ್ತಕ್ಷೇಪ ನಡೆಯುತ್ತಿದೆ ಎಂದು ಆರೋಪಿಸಿದ ಬೊಮ್ಮಾಯಿ, ರಾಜ್ಯ ಸರ್ಕಾರದ ರಿಮೋಟ್ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿದೆ. ದೆಹಲಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಕಪ್ಪಕಾಣಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡುವುದು ಸಹಜ. ನಿನ್ನೆ ನಡೆದ ಸಭೆಯಲ್ಲೂ ಅದು ಮತ್ತೆ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.
ಸಚಿವ ಸಂಪುಟವೇ ಹೋಗಿ ಸಭೆ ಮಾಡುವುದು ಎಷ್ಟು ಸರಿ?
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಭೆ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ ಸಚಿವ ಸಂಪುಟವೇ ಹೋಗಿ ಸಭೆ ಮಾಡುವುದು ಸರಿಯಲ್ಲ ಎಂದು ಬೊಮ್ಮಾಯಿ ಹೇಳಿದರು. ಈ ಹಿಂದೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅಧಿಕಾರಗಳ ಜೊತೆ ಸಭೆ ಮಾಡಿದ್ದರು. ರಾಜ್ಯದ ಜನರು ಸ್ಪಷ್ಟ ಬಹುಮತ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಕರ್ನಾಟಕದ ಜನರಿಗೆ ಇದು ಅವಮಾನ ಮಾಡಿದಂತಾಗುತ್ತದೆ ಎಂದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಆಡಳಿತವೆಂಬುದು ತಮಾಷೆಯಾಗಿದೆ; ಬಿಜೆಪಿ ವ್ಯಂಗ್ಯ, ಕಾರಣ ಇಲ್ಲಿದೆ
ರಾಜ್ಯ ಸರ್ಕಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಅನಿಸುತ್ತದೆ. ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ತಮ್ಮ ಪಕ್ಷದ ಶಾಸಕರೇ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತಿದೆ, ಅಭಿವೃದ್ಧಿ ಮೇಲೆ ಪೆಟ್ಟು ಬೀಳುತ್ತಿದೆ. ಆಡಳಿತ ವೈಫಲ್ಯ ನೋಡುತ್ತಿದ್ದೇವೆ. ಸರ್ಕಾರದ ಪ್ರತಿ ವಿಚಾರದಲ್ಲೂ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿದೆ. ದೆಹಲಿಯಿಂದಲೇ ರಾಜ್ಯ ಸರ್ಕಾರದ ರಿಮೋಟ್ ಕಂಟ್ರೋಲ್ ಆಗುತ್ತಿದೆ ಎಂದರು.
ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ಹಿಂದೆಯೂ ನಡೆದಿರಲಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಸಚಿವ ಸಂಪುಟವೇ ಮುಖ್ಯವಾಗಿರುತ್ತದೆ. ಒಬ್ಬ ಮಂತ್ರಿಯನ್ನು ಬಿಡದೆ ಎಲ್ಲರನ್ನೂ ಕರೆದುಕೊಂಡು ಹೋಗಿ ಸಭೆ ನಡೆಸಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಅನ್ನೊ ಪ್ರಶ್ನೆಗೆ, ಅವರನ್ನೇ ಕೇಳಿ ಎಂದು ಬೊಮ್ಮಾಯಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ