ಪಂಜಾಬ್: ಕರ್ನಾಟಕ ಬಿಜೆಪಿ ಪಾಳಯದಲ್ಲಿ ಭಿನ್ನಮತ ಉಂಟಾದ ಪರಿಣಾಮ ಬಿ.ಎಸ್. ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಗುಜರಾತ್ನಲ್ಲಿಯೂ ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಎದ್ದಿದ್ದರಿಂದ ದಿಢೀರ್ ಎಂದು ವಿಜಯ್ ರೂಪಾನಿ (Vijay Rupani) ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಇದೀಗ ಕಾಂಗ್ರೆಸ್ ಪಾಳಯದಲ್ಲೂ ಇದೇ ಸಂಪ್ರದಾಯ ಶುರುವಾಗಿದ್ದು, ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೈಕಮಾಂಡ್ ಸೂಚಿಸಿದ್ದರಿಂದ ಅಮರೀಂದರ್ ಸಿಂಗ್ (Amarinder Singh) ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ. ರಾಜಭವನಕ್ಕೆ ತೆರಳಿ ಅಮರೀಂದರ್ ಸಿಂಗ್ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದಾರೆ. ಹಾಗಾದರೆ, ಈ ಅಮರೀಂದರ್ ಸಿಂಗ್ ಯಾರು? ಇಲ್ಲಿದೆ ಪೂರ್ತಿ ಮಾಹಿತಿ.
ಅಮರೀಂದರ್ ಸಿಂಗ್ ರಾಜಕಾರಣಕ್ಕೂ ಮೊದಲು ಸೇನಾಪಡೆಯಲ್ಲಿ ಕ್ಯಾಪ್ಟನ್ ಆಗಿದ್ದವರು. ಅಷ್ಟೇ ಅಲ್ಲ, ರಾಜವಂಶಸ್ಥರೂ ಆಗಿರುವ ಅಮರೀಂದರ್ ಸಿಂಗ್ ಲೇಖಕರೂ ಹೌದು. ಪಟಿಯಾಲದ ಫುಲ್ಕಿಯಾನ್ ರಾಜಮನೆತನದ ಮಹಾರಾಜ ಯದವೀಂದ್ರ ಸಿಂಗ್ ಹಾಗೂ ಮಹಾರಾಣಿ ಮೋಹಿಂದರ್ ಕೌರ್ ಅವರ ಮಗನಾಗಿರುವ ಅಮರೀಂದರ್ ಸಿಂಗ್ ಪಟಿಯಾಲದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದವರು. ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಅಮರೀಂದರ್ ಸಿಂಗ್ ಅತ್ಯಂತ ಹಿರಿಯ ಮುಖ್ಯಮಂತ್ರಿಯಾಗಿದ್ದಾರೆ.
1963ರಿಂದ 1966ರವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅಮರೀಂದರ್ ಸಿಂಗ್ 1965ರ ಇಂಡೋ- ಪಾಕಿಸ್ತಾನ್ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು. ರಾಜೀವ್ ಗಾಂಧಿ ಅವರ ಪ್ರೇರೇಪಣೆಯಿಂದ ರಾಜಕೀಯಕ್ಕೆ ಬಂದ ಅಮರೀಂದರ್ ಸಿಂಗ್ ಹಾಗೂ ರಾಜೀವ್ ಗಾಂಧಿ ಕ್ಲಾಸ್ಮೇಟ್ಸ್ ಆಗಿದ್ದರು. 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಪ್ರಯತ್ನದಲ್ಲೇ ಅಮರೀಂದರ್ ಸಿಂಗ್ ಗೆಲುವು ಕಂಡರು. ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಕೂಡ 2009ರಿಂದ 2012ರ ಅವಧಿಯಲ್ಲಿ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ಅಮರೀಂದರ್ ಸಿಂಗ್ ಮೂರು ಬಾರಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 2002ರಲ್ಲಿ ಪಂಜಾಬ್ ಮುಖ್ಯಮಂತ್ರಿಯಾದರು. 2017ರಲ್ಲಿ ಮತ್ತೆ ಪಂಜಾಬ್ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಇಂದಿನವರೆಗೂ ಪಂಜಾಬ್ ಸಿಎಂ ಆಗಿದ್ದ ಅಮರೀಂದರ್ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನವಜೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ಗೆ ಕರೆದುಕೊಂಡು ಬಂದಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಾಜ್ವಾ ಅವರನ್ನು ತಬ್ಬಿಕೊಂಡಿದ್ದರು. ಹೀಗಾಗಿ, ಸಿಧು ವಿರುದ್ಧ ಅಮರೀಂದರ್ ಸಿಂಗ್ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಇನ್ನಷ್ಟು ಹೆಚ್ಚಾಗಿತ್ತು.
ಆದರೆ, ಕೊಟ್ಕಾಪುರ ಶೂಟೌಟ್ ಪ್ರಕರಣದಲ್ಲಿ ಅಮರೀಂದರ್ ಸಿಂಗ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿತ್ತು. ಇದಾದ ಬಳಿಕ ಪಂಜಾಬ್ನ ಕಾಂಗ್ರೆಸ್ ಸರ್ಕಾರದ ನಾಯಕರಾದ ಸುನೀಲ್ ಜಕಾರ್, ಸುಖ್ಜಿಂದರ್ ರಾಂಧವ ಸೇರಿದಂತೆ ಹಲವು ನಾಯಕರು ತಾವು ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದ್ದರು.
ಈ ವೇಳೆಗೆ ಅಮರೀಂದರ್ ಸಿಂಗ್ ಎದುರಾಳಿಯಾಗಿದ್ದ ನವಜೋತ್ ಸಿಂಗ್ ಸಿಧು ಪಕ್ಷದೊಳಗಿನ ನಾಯಕರ ಬೆಂಬಲವನ್ನು ತನ್ನೆಡೆಗೆ ಸೆಳೆದುಕೊಂಡರು. 2021ರ ಜುಲೈನಲ್ಲಿ ನವಜೋತ್ ಸಿಂಗ್ ಸಿಧುವನ್ನು ಅಮರೀಂದರ್ ಸಿಂಗ್ ವಿರೋಧದ ನಡುವೆಯೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು. ಇದಾದ ಬಳಿಕ ಪಂಜಾಬ್ ಕಾಂಗ್ರೆಸ್ ಎರಡು ಬಣಗಳಾಗಿ ಇಬ್ಭಾಗವಾಯಿತು.
ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಪಂಜಾಬ್ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಿರುದ್ಧ ಹಲವು ಶಾಸಕರು ಹಾಗೂ ಸಚಿವರು ಬಂಡಾಯವೆದ್ದಿದ್ದಾರೆ. 2017ರ ವಿಧಾನಸಭೆ ಚುನಾವಣೆಗೂ ಮುನ್ನ ಅಮರೀಂದರ್ ಸಿಂಗ್ ನೀಡಿದ್ದ ಭರವಸೆಗಳು ರಾಜ್ಯದಲ್ಲಿ ಈಡೇರದೆ ಇರುವುದೇ ಬಂಡಾಯಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಆ ಬಂಡಾಯದ ಪರಿಣಾಮವಾಗಿ ಪಂಜಾಬ್ನಲ್ಲಿ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರ ಪತನವಾಗಿದೆ. ಹೊಸ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.
ಯುದ್ಧ ಹಾಗೂ ಸಿಖ್ಖರ ಇತಿಹಾಸದ ಬಗ್ಗೆ ಹಲವು ಪುಸ್ತಕಗಳನ್ನು ಅಮರೀಂದರ್ ಸಿಂಗ್ ಬರೆದಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್; ದಿ ಪೀಪಲ್ಸ್ ಮಹಾರಾಜ ಇನ್ 2017 ಎಂಬ ಆತ್ಮಕತೆಯನ್ನು ಕೂಡ ಅಮರೀಂದರ್ ಸಿಂಗ್ ಬರೆದಿದ್ದಾರೆ. ರಾಜಕಾರಣಿ, ಸೇನಾ ಕ್ಯಾಪ್ಟನ್, ಲೇಖಕ, ರಾಜವಂಶಸ್ಥ ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅಮರೀಂದರ್ ಸಿಂಗ್ ಅವರ ಮುಂದಿನ ನಡೆಯೇನು? ಅವರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುತ್ತಾರಾ? ತಾವೇ ಬಂಡಾಯ ಅಭ್ಯರ್ಥಿಯಾಗಿ ಮುಂದಿನ ವರ್ಷದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಅಥವಾ ರಾಜಕಾರಣದಿಂದಲೇ ದೂರ ಸರಿಯುತ್ತಾರಾ? ಎಂಬ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಬೇಕಾಗಿದೆ.
Punjab Congress Crisis: ಪಂಜಾಬ್ ಹೊಸ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ಸೋನಿಯಾ ಗಾಂಧಿ ಹೆಗಲಿಗೆ
(Amarinder Singh Resigned as Chief Minister of Punjab who is Captain Amarinder Singh unknown Facts is here)