Punjab Congress Crisis: ಪಂಜಾಬ್ ಹೊಸ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ಸೋನಿಯಾ ಗಾಂಧಿ ಹೆಗಲಿಗೆ

Punjab Congress Crisis: ಪಂಜಾಬ್ ಹೊಸ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ಸೋನಿಯಾ ಗಾಂಧಿ ಹೆಗಲಿಗೆ
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಅಮರೀಂದರ್ ಸಿಂಗ್

ಪಂಜಾಬ್​ನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೇ ವಹಿಸಲಾಗಿದೆ.

TV9kannada Web Team

| Edited By: Sushma Chakre

Sep 18, 2021 | 6:59 PM

ನವದೆಹಲಿ: ಪಂಜಾಬ್​ ರಾಜ್ಯದ ಕಾಂಗ್ರೆಸ್ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ಇಂದು ರಾಜೀನಾಮೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೂ ನಡೆದಿದ್ದು, ಪಂಜಾಬ್​ನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೇ ವಹಿಸಲಾಗಿದೆ.

ಅಮರೀಂದರ್ ಸಿಂಗ್ ನೀಡಿರುವ ರಾಜೀನಾಮೆಯನ್ನು ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಸ್ವೀಕರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿಯ ಆಯ್ಕೆಯಾಗುವವರೆಗೂ ಸಿಎಂ ಹಾಗೂ ಸಚಿವರಿಗೆ ಕಚೇರಿಯಲ್ಲಿ ಕೆಲಸದ ಉಸ್ತುವಾರಿ ನೋಡಿಕೊಳ್ಳುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸರ್ಕಾರಿ ಕೆಲಸಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಆದೇಶ ನೀಡಲಾಗಿದೆ. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಪಂಜಾಬ್ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್​ಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಪಂಜಾಬ್​ ನೂತನ ಸರ್ಕಾರದ ಸಂಪೂರ್ಣ ಜವಾಬ್ದಾರಿ ಸೋನಿಯಾ ಗಾಂಧಿ ಹೆಗಲ ಮೇಲಿದೆ.

ಪಂಜಾಬ್​ನ 40 ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು. ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನಿಲ್ ಜಕಾರ್, ಲುಧಿಯಾನಾ ಸಂಸದ ರವನೀತ್ ಸಿಂಗ್, ರಾಜ್​ಕುಮಾರ್ ವರ್ಕಾ ಅಥವಾ ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಪಂಜಾಬ್​ನ ನೂತನ ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ಈಗಾಗಲೇ ಪಂಜಾಬ್ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯಗಳಿಂದ ನವಜೋತ್ ಸಿಂಗ್ ಸಿಧು ಅವರನ್ನು ಸಿಎಂ ರೇಸ್​ನಿಂದ ಹೊರಗಿಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ಪಕ್ಷ ಕೂಡ ಕರ್ನಾಟಕ, ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿತ್ತು.

ಈ ಹಿಂದೆ ಗುಜರಾತ್​, ಕರ್ನಾಟಕದಲ್ಲಿಯೂ ಇದೇ ರೀತಿ ಮುಖ್ಯಮಂತ್ರಿಯ ಬದಲಾವಣೆಗೆ ಬಿಜೆಪಿ ಮುಂದಾದಾಗ ಅದನ್ನು ರಾಜಕೀಯದ ಚಾಣಕ್ಯ ನೀತಿ ಎನ್ನುವ ಮಾಧ್ಯಮ ಇಲ್ಲಿ ಮಾತ್ರ ಕಾಂಗ್ರೆಸ್​ ಹೈಕಮಾಂಡ್​ ವಿಫಲ ಎಂದು ಹೇಳುತ್ತಿದೆ ಎಂಬುದು ಕಾಂಗ್ರೆಸ್​ ವಕ್ತಾರರ ಆರೋಪವಾಗಿದೆ.

ಕಾಂಗ್ರೆಸ್​ನ ಆರೋಪ ಎಷ್ಟು ಸರಿ?: 1. ಗುಜರಾತ್​ ಮತ್ತು ಕರ್ನಾಟಕದಲ್ಲಿ ಸುಮಾರು 20 ತಿಂಗಳ ಅಧಿಕಾರಾವಧಿ ಬಾಕಿ ಇದೆ. ಆದರೆ, ಪಂಜಾಬಿನಲ್ಲಿ ಬರೀ ಐದು ತಿಂಗಳು. ಐದು ತಿಂಗಳು ಮೊದಲು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಜನರಲ್ಲಿ ಗೊಂದಲ ಖಂಡಿತ. ಇದರಿಂದ ಪಕ್ಷಕ್ಕೆ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೂ ಹೊಡೆತ ಬೀಳುತ್ತದೆ.

2. ಗುಜರಾತ್​ ಮತ್ತು ಕರ್ನಾಟಕದಲ್ಲಿ ಪಕ್ಷದ ಸ್ಥಳೀಯ ಅಧ್ಯಕ್ಷರಿಗೂ ಮುಖ್ಯಮಂತ್ರಿ ಆಗಿದ್ದವರಿಗೂ ಅಭಿಪ್ರಾಯ ವ್ಯತ್ಯಾಸ ಇರಲಿಲ್ಲ. ಆದರೆ, ಪಂಜಾಬಿನಲ್ಲಿ ದಿನಾ ಬೆಳಿಗ್ಗೆ ನವಜೋತ್​ ಸಿಂಗ್​ ಸಿಧು ಮತ್ತು ಅಮರೀಂದರ್​ ಸಿಂಗ್​ ನಡುವೆ ಶೀತಲ ಯುದ್ಧ ನಡೆಯುತ್ತಿತ್ತು.

3. ವಿಜಯ್​ ರೂಪಾನಿ ಮತ್ತು ಬಿ.ಎಸ್​. ಯಡಿಯೂರಪ್ಪನವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರಲಿಲ್ಲ. ಆದರೆ, ಕಾಂಗ್ರೆಸ್​ ಹೈ ಮಾಂಡ್​ ಅಮರೀಂದರ್​ ಸಿಂಗ್​ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ನಂತರ ಈಗ ಅವರನ್ನು ಇಳಿಸುವ ಮೂಲಕ ತಮ್ಮ ಮಾತನ್ನೇ ತಾವು ಉಳಿಸಿಕೊಳ್ಳದ ಸ್ಥಿತಿಗೆ ಬಂದು ನಿಂತಿದ್ದಾರೆ

ಪಂಜಾಬ್​ನಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಅಕಾಲಿ ದಳದ ಸುಖಬೀರ್​ ಸಿಂಗ್​ ಬಾದಲ್​ ತಂಡ ಬಹಳ ಪ್ರಯತ್ನ ಪಡುತ್ತಿದೆ. ಆಮ್​ ಆದ್ಮಿ ಪಕ್ಷ ಈಗಲೇ ತನ್ನ ಪ್ರಚಾರ ಕಾರ್ಯ ಶುರು ಮಾಡಿದೆ. ಈ ಬಾರಿ ಹೇಗಾದರೂ ಮಾಡಿ ಪಂಜಾಬಿನಲ್ಲಿ ಅಧಿಕಾರಕ್ಕೆ ಬರಲೇಬೇಕೆಂಬುದು ಆ ಪಕ್ಷದ ನಾಯಕರ ತಂತ್ರ. ಬಿಜೆಪಿ ಈಗ ಕ್ಯಾಪ್ಟನ್ ಅಮರೀಂದರ್​ ಸಿಂಗ್​ ಅವರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುವುದು ಖಂಡಿತ. ಈ ಹಿಂದೆ 2016ರಲ್ಲಿ ಅಮರೀಂದರ್​ ಸಿಂಗ್​ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಹಿಂದೇಟು ಹಾಕಿದಾಗ ಸಿಂಗ್ ನರೇಂದ್ರ​ ಮೋದಿ ಜೊತೆ ಮಾತುಕತೆ ನಡೆಸಿದ್ದರು ಎಂದು ಎನ್​ಡಿಟಿವಿ ಹೇಳಿದೆ.

ಆಗ ಹಾಕಿದ ಷರತ್ತು ಏನೆಂದರೆ, ಬಿಜೆಪಿ-ಬಾದಲ್​ ಕುಟುಂಬ ನಿಯಂತ್ರಿತ-ಅಕಾಲಿ ದಳದೊಂದಿಗಿನ ಸಂಬಂಧ ಕಡಿದುಕೊಳ್ಳಬೇಕು. ಆದರೆ, ಆಗ ಅದು ಆಗಿರಲಿಲ್ಲ. ಕೇಂದ್ರ ಸರ್ಕಾರ ತಂದ ಮೂರು ಕೃಷಿ ಕಾಯ್ದೆಯ ಜಾರಿ ಹೊತ್ತಿನಲ್ಲಿ ಅಕಾಲಿ ದಳ-ಬಿಜೆಪಿ ಜೊತೆಗಿನ ಸಂಬಂಧ ಕಡಿದುಕೊಂಡಿತು. ಹಲವು ಬಾರಿ ಅಮರೀಂದರ್​ ಸಿಂಗ್​ ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾಯ್ದೆಯನ್ನು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹೊಗಳಿದ್ದರು. ತಮ್ಮದೇ ಪಕ್ಷದ ಹೈಕಮಾಂಡ್​ ಹೇಳಿಕೆಗೆ ವಿರುದ್ಧ ಹೇಳಿಕೆ ಕೊಟ್ಟಿದ್ದರು. ಇದು ಕೂಡ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Amarinder Singh: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ; ಕಾಂಗ್ರೆಸ್​ನಿಂದ ಅವಮಾನವಾಗಿದೆ ಎಂದ ಕ್ಯಾಪ್ಟನ್

ಅಮರೀಂದರ್ ಸಿಂಗ್​ ನೇತೃತ್ವದಲ್ಲೇ 2022ರ ಪಂಜಾಬ್ ಚುನಾವಣೆ; ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಸ್ಪಷ್ಟನೆ

(Punjab Congress Crisis: CM Amarinder Singh resigned Sonia Gandhi will Decide on Punjab New Leader CLP Meeting Decision)

Follow us on

Related Stories

Most Read Stories

Click on your DTH Provider to Add TV9 Kannada