ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದ ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ

Babul Supriyo | ಇಂದು ಮಾಜಿ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ನಾನು ರಾಜಕೀಯದಿಂದ ದೂರ ಸರಿದರೂ ಸಂಸದನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸುಪ್ರಿಯೋ ಘೋಷಿಸಿದ್ದರು.

ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದ ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ
ಬಾಬುಲ್ ಸುಪ್ರಿಯೋ

ಕೊಲ್ಕತ್ತಾ: ಜುಲೈ 7ರಂದು ಕೇಂದ್ರ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಆಗಸ್ಟ್​ನಲ್ಲಿ ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಮಾಜಿ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ನಾನು ರಾಜಕೀಯದಿಂದ ದೂರ ಸರಿದರೂ ಸಂಸದನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸುಪ್ರಿಯೋ ಘೋಷಿಸಿದ್ದರು.

ನಾನು ಸಂಸದನಾಗಿ ಮುಂದುವರಿಯುತ್ತೇನೆ ಆದರೆ ನಾನು ರಾಜಕೀಯವನ್ನು ಬಿಡುತ್ತೇನೆ. ನಾನು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆಯುತ್ತೇನೆ. ನಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಬಾಬುಲ್ ಸುಪ್ರಿಯೊ ಹೇಳಿದ್ದರು. ಅಲ್ಲದೆ, ಸರ್ಕಾರಿ ಬಂಗಲೆಯನ್ನು ಕೂಡ ಅವರು ತೊರೆದಿದ್ದರು.

ಅದಕ್ಕೂ ಮೊದಲು, ನಾನು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿ, ರಾಜಕಾರಣದಿಂದ ದೂರ ಉಳಿಯುವುದಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ಬಾಬುಲ್ ಸುಪ್ರಿಯೋ, ನಾನು ಬಿಜೆಪಿಯನ್ನು ತೊರೆದು ಬೇರಾವ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಆದರೆ, ಇದೀಗ ಆ ಭಾಗವನ್ನು ಡಿಲೀಟ್ ಮಾಡಿರುವ ಅವರು ತಮ್ಮ ಫೇಸ್​ಬುಕ್ ಪೋಸ್ಟ್ ಅನ್ನು ಎಡಿಟ್ ಮಾಡಿ ಆ ವಾಕ್ಯವನ್ನು ತೆಗೆದುಹಾಕಿದ್ದು ಚರ್ಚೆಗೆ ಕಾರಣವಾಗಿತ್ತು.

ಜುಲೈನಲ್ಲಿ ಡಿ.ವಿ. ಸದಾನಂದ ಗೌಡ ಸೇರಿದಂತೆ 12 ಸಚಿವರ ಬಳಿ ರಾಜೀನಾಮೆ ಪಡೆದು ಹೊಸ ಸಚಿವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ನಮಗೆ ಹೈಕಮಾಂಡ್​ನಿಂದ ಆದೇಶ ನೀಡಲಾಗಿತ್ತು. ಅದರಂತೆ ರಾಜೀನಾಮೆ ನೀಡಿದ್ದೇವೆ ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಬರೆದುಕೊಂಡು ಅನೇಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮೊದಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬಾಬುಲ್ ಸುಪ್ರಿಯೋ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಸಂಪುಟ ಪುನಾರಚನೆ ವೇಳೆ ಅವರು ರಾಜೀನಾಮೆ ನೀಡಿದ್ದರು. ಗಾಯಕರಾಗಿದ್ದ ಬಾಬುಲ್ ಸುಪ್ರಿಯೋ ಬಳಿಕ ರಾಜಕಾರಣಕ್ಕೆ ಇಳಿದಿದ್ದರು. ರಾಜಕಾರಣಕ್ಕೆ ಗುಡ್​ ಬೈ ಹೇಳುತ್ತಿರುವುದಾಗಿ ಸುದೀರ್ಘವಾದ ಫೇಸ್​ಬುಕ್ ಪೋಸ್ಟ್ ಮೂಲಕ ಸಂಸದ ಸುಪ್ರಿಯೋ ತಿಳಿಸಿದ್ದರು.

ನಾನು ರಾಜಕಾರಣಕ್ಕೆ ಬಂದು ಬಹಳ ಸಮಯವಾಯಿತೇನೋ ಎನಿಸುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಹಲವರಿಗೆ ಸಹಾಯ ಮಾಡಿದೆ, ಇನ್ನು ಕೆಲವರಿಗೆ ಬೇಸರವನ್ನೂ ಮಾಡಿದೆ. ಇದೀಗ ಗುಡ್​ ಬೈ ಹೇಳುವ ಸಮಯ ಬಂದಿದೆ ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು.

ನಾನು ಬಿಜೆಪಿ ಪಕ್ಷ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷವನ್ನೂ ಸೇರುತ್ತಿಲ್ಲ. ನನಗೆ ತಮ್ಮ ಪಕ್ಷಕ್ಕೆ ಬರಬೇಕೆಂದು ಯಾರೂ ಫೋನ್ ಕೂಡ ಮಾಡಿಲ್ಲ. ಕರೆದರೂ ನಾನು ಹೋಗುವುದಿಲ್ಲ. ನಾನು ಒಂದೇ ತಂಡದಲ್ಲಿ ಆಡುವ ಆಟಗಾರ! ಎಂದಿಗೂ ಅದೇ ತಂಡಕ್ಕೆ ನನ್ನ ಬೆಂಬಲ ಇರುತ್ತದೆ. ನಾನು ಮೊದಲಿನಿಂದಲೂ ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದಲ್ಲೇ ಗುರುತಿಸಿಕೊಂಡಿದ್ದೇನೆ. ಮುಂದೆ ಕೂಡ ಬೇರೆ ಪಕ್ಷವನ್ನು ಸೇರುವುದಿಲ್ಲ. ಇಷ್ಟು ಬಿಟ್ಟು ಬೇರೇನೂ ಹೇಳಲು ಸಾಧ್ಯವಾಗುತ್ತಿಲ್ಲ! ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಈ ಭಾಗವನ್ನು ಈ ಡಿಲೀಟ್ ಮಾಡಿದ್ದರು.

ನನಗೆ ಮೋದಿಜೀ, ಅಮಿತ್​ ಶಾ, ನಡ್ಡಾ ಅವರು ನೀಡಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾನು ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಅವರು ನನ್ನನ್ನ ಅಪಾರ್ಥ ಮಾಡಿಕೊಳ್ಳುವುದಿಲ್ಲ ಎಂದು ನಂಬಿದ್ದೇನೆ. ನಾನು ರಾಜೀನಾಮೆ ನೀಡುತ್ತೇನೆ ಎನ್ನುವ ಮೂಲಕ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದೇನೆ ಎಂದು ಅವರು ತಪ್ಪು ತಿಳಿದುಕೊಳ್ಳಬಾರದು. ನನಗೆ ಆ ರೀತಿಯ ಯಾವ ಆಸೆಯೂ ಈಗ ಇಲ್ಲ. 1992ರಲ್ಲಿ ಇದೇ  ರೀತಿ ನಾನು ನನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದೆ. ಈಗ ಮತ್ತೆ ಅದೇ ಕೆಲಸ ಮಾಡಲು ನಿರ್ಧರಿಸಿದ್ದೇನೆ. ನನಗೆ ಬದಲಾವಣೆ ಬೇಕಾಗಿದೆ. ಹೇಳಬೇಕಾದ ಕೆಲವು ಮಾತುಗಳು ನನ್ನಲ್ಲೇ ಉಳಿದಿವೆ. ಆ ಮಾತುಗಳನ್ನು ಹೇಳಲು ಇನ್ನೆಂದೂ ಸಮಯ ಬರುವುದಿಲ್ಲ ಎನಿಸುತ್ತಿದೆ. ಆ ಮಾತುಗಳು ನನ್ನಲ್ಲೇ ಉಳಿದುಹೋಗಲಿ. ನಾನು ಹೋಗುತ್ತಿದ್ದೇನೆ, ಗುಡ್ ಬೈ’ ಎಂದು ಬಾಬುಲ್ ಸುಪ್ರಿಯೋ ಸುದೀರ್ಘವಾದ ಪೋಸ್ಟ್ ಮಾಡಿದ್ದರು.

ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಾಬುಲ್ ಸುಪ್ರಿಯೋ ಇದೀಗ ಅಧಿಕೃತವಾಗಿ ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ. ಟಿಎಂಸಿ ಸಂಸದ ಅಭಿಷೇಕ್ ಮುಖರ್ಜಿ ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: Babul Supriyo ‘ಸಂಸದನಾಗಿಯೇ ಉಳಿಯುತ್ತೇನೆ’: ಜೆಪಿ ನಡ್ಡಾ ಭೇಟಿ ನಂತರ ನಿರ್ಧಾರ ಬದಲಿಸಿದ ಮಾಜಿ ಸಚಿವ ಬಾಬುಲ್ ಸುಪ್ರಿಯೊ

Babul Supriyo: ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಾರಾ ಸಂಸದ ಬಾಬುಲ್ ಸುಪ್ರಿಯೋ?; ಅನುಮಾನಕ್ಕೆ ಕಾರಣವಾಯ್ತು ಫೇಸ್​ಬುಕ್ ಪೋಸ್ಟ್

( Former BJP Leader Babul Supriyo Joins Trinamool Congress TMC Month After Quitting Politics)

Click on your DTH Provider to Add TV9 Kannada