ಬೆಂಗಳೂರು: ಹಳೇ ಗಾಯಕ್ಕೆ ಹೊಸ ಪೆಟ್ಟು ಬಿದ್ದಿದೆ. ತಣ್ಣಗಿದ್ದ ರಾಜ್ಯ ರಾಜಕಾರಣದಲ್ಲಿ ಗೋಹತ್ಯೆ ನಿಷೇಧದ ಕಾಯ್ದೆ ವಾಪಸ್ (Anti-Cow Slaughter Act) ಕಿಚ್ಚು ಹೊತ್ತಿಸಿದೆ. ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ನೀಡಿದ ಹೇಳಿಕೆ ಸದ್ಯ ರಾಜಕೀಯ ಅಂಗಳದಲ್ಲಿ ಚರ್ಚೆಯ ವಿಷಯವಾಗಿದೆ. ಬಿಜೆಪಿ ನಾಯಕರು ಉರಿದುರಿದು ಬೀಳುತ್ತಿದ್ದು, ವಾಗ್ಯುದ್ಧಕ್ಕೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ. ಸಚಿವ ಕೆ. ವೆಂಕಟೇಶ್ ಹೇಳಿಕೆಗೆ ಪ್ರತಿಯೊಬ್ಬರು ತಿರುಗೇಟು ನೀಡುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಆಕ್ರೋಶ ವ್ಯಕ್ತವಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಲಾಗುತ್ತಿದೆ.
ಹಾಸನದಲ್ಲಿ ಬಿಜೆಪಿ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಡಿಸಿ ಕಛೇರಿ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಗೋಹತ್ಯೆ ನಿಷೇಧ ರದ್ದು ಮೂಲಕ ಬಹುಜನರ ಭಾವನೆಗೆ ಧಕ್ಕೆ ಆರೋಪ ಮಾಡಲಾಗಿದೆ. ಕೂಡಲೇ ಗೋಹತ್ಯೆ ನಿಷೇಧ ಕಾಯಿದೆ ರದ್ದು ಮಾಡೋ ನಿರ್ಧಾರ ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಸದ ಶಿವಕುಮಾರ್ ಉದಾಸಿ ಹಾಗೂ ಬಿಜೆಪಿ ಜಿಲ್ಲಾಧ್ಯಕರ ನೇತೃತ್ವದಲ್ಲಿ ಹಾವೇರಿ ನಗರದ ಸಿದ್ದಪ್ಪ ಸರ್ಕಲ್ನಲ್ಲಿ ಕಾಂಗ್ರೆಸ್ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಮಾಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ಇದು ಸರಿಯಾದ ನಿರ್ಧಾರವಲ್ಲ. ಈ ಕಾಯ್ದೆ ರದ್ದು ಮಾಡುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಬಾರದು. ಇದು ಹಿಂದೂ ವಿರೋಧಿ ನೀತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದರ ಜೊತೆಗೆ ವಿದ್ಯುತ್ ದರ ಕೂಡಾ ಏರಿಕೆ ಮಾಡಿದ್ದೀರಿ. ಜನ ಸಾಮಾನ್ಯರು ಏನಾಗಬೇಕು ಎಂದು ಘೋಷಣೆ ಹಾಕಲಾಗಿದೆ. ಜನ ಹಾಗೂ ಹಿಂದೂ ವಿರೋಧಿ ನೀತಿಯನ್ನು ಹಿಂಪಡೆಯದಿದ್ದರೆ, ಮುಂದೆ ಮತ್ತಷ್ಟು ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿಲಾಗಿದೆ.
ಕೋಲಾರದಲ್ಲಿಯೂ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡಿದ್ದು, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್, ವಿದ್ಯುತ್ ದರ ಹೆಚ್ಚಳ ಹಾಗೂ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಕಡಿಮೆ ಮಾಡಿರುವ ಹಿನ್ನೆಲೆ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ದ ಜಿ.ಪಂ ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ ಮಾಡಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಮುಂದುವರಿಸಿ, ವಿದ್ಯುತ್ ದರ ಏರಕೆ ಮಾಡಬೇಡಿ ಮತ್ತು ಹಾಲಿನ ಪ್ರೋತ್ಸಾಹ ಧನ ಕಡಿತಕ್ಕೆ ಮಾಡಿದಕ್ಕೆ ವಿರೋಧ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.