ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಆರೋಪ: ಡಿಸಿಎಂ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳ ಅಮಾನತು
ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳಾದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಇಇ ಹೆಚ್.ಎಸ್.ಮೇಘಾ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಶಿಲ್ಪಾರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸೂಚನೆ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳಾದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಇಇ ಹೆಚ್.ಎಸ್.ಮೇಘಾ ಮತ್ತು ಅಸಿಸ್ಟೆಂಟ್ ಇಂಜಿನಿಯರ್ ಶಿಲ್ಪಾರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಪಾರ್ಟ್ಮೆಂಟ್ ಮಾಲೀಕರಿಗೆ ಅನುಕೂಲವಾಗಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಆರೋಪ ಕೇಳಿಬಂದಿತ್ತು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಇಂದು ಸಂಜೆಯೊಳಗಡೆ ಅಮಾನತು ಮಾಡುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ಸಹ ನೀಡಿದ್ದರು. ಹಾಗಾಗಿ ರಾಜ್ಯಪಾಲರ ಆದೇಶಾನುಸಾರ ಮಹಿಳಾ ಅಧಿಕಾರಿಗಳ ಅಮಾನತು ಮಾಡಲಾಗಿದೆ.
ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕೆ ಯೋಜನೆ ಮಾಡಿದ್ದೀರಿ, ಯಾರ ಅನುಕೂಲಕ್ಕೆ ಮಾಡಿದ್ದೀರಿ? ಯಾರು ಭಾಗಿಯಾಗಿದ್ದೀರಿ ಎಂದು ಇಂದು ನಡೆದ ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದರು. ಅಧಿಕಾರಿಗಳು ಉತ್ತರಿಸಲು ತಡಬಡಾಯಿಸಿದ್ದು, ಮಾಜಿ ಸಚಿವ ಮುನಿರತ್ನ ಕ್ಷೇತ್ರದಲ್ಲಿ ನಡೆದಿರುವ ರಸ್ತೆ ನಿರ್ಮಾಣ ಕೆಲಸ ಇದಾಗಿದೆ.
ಇದನ್ನೂ ಓದಿ: ರಾಜಕೀಯ ಬಿಟ್ಟು ಬೆಂಗಳೂರು ಅಭಿವೃದ್ಧಿ ಮಾಡೋಣ: ಶಾಸಕರ ಸಭೆಯಲ್ಲಿ ಡಿಕೆ ಶಿವಕುಮಾರ್ ಕಿವಿಮಾತು
ತುಷಾರ್ ಗಿರಿನಾಥ್ಗೆ ಡಿಸಿಎಂ ಸೂಚನೆ
ಈಜಿಪುರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಸೂಚನೆ ನೀಡಿದ್ದಾರೆ. ಇದೇ ವೇಳೆ ಬೆಂಗಳೂರು ಬಗ್ಗೆ ದೂರದೃಷ್ಟಿ ಯೋಜನೆ ರೂಪಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಿಸಿಎಂ, ಬೆಂಗಳೂರಿನ ಕೆಲವೆಡೆ ಹೋರ್ಡಿಂಗ್ಸ್ ಇವೆ, ಅನುಮತಿ ಕೊಟ್ಟಿದ್ಯಾರು? ಒಂದೊಂದು ಪ್ರದೇಶಕ್ಕೆ ಒಂದೊಂದು ನೀತಿ ಹೇಗೆ? ಎಲ್ಲೆಡೆ ಅನ್ವಯ ಆಗುವಂತೆ ಸಾಮಾನ್ಯ ನೀತಿ ರೂಪಿಸುವಂತೆ ಸೂಚನೆ ನೀಡಿದರು.
ಇದನ್ನೂ ಓದಿ: ಪಿಎಸ್ಐ ಹಗರಣದಲ್ಲಿ ಸುಮ್ಮನೇ ನನ್ನ ಹೆಸರು ತೇಲಿಬಿಟ್ಟಿದ್ದಾರೆ, ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ; ಬಿವೈ ವಿಜಯೇಂದ್ರ ಸವಾಲು
ಬೆಂಗಳೂರು ಪರಿವರ್ತನೆಗೆ ಮನವಿ ಮಾಡಿದ ಡಿ.ಕೆ ಶಿವಕುಮಾರ್
ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ದಿಕ್ಕು ತಪ್ಪಿಸಿದರೆ ಸಹಿಸಲ್ಲ. ಅಂತಹ ಅಧಿಕಾರಿಗಳು ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತನ್ನಿ. ಆ ಮೂಲಕ ಬೆಂಗಳೂರು ಪರಿವರ್ತನೆ ಮಾಡುವ ಎಂದು ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:50 pm, Mon, 5 June 23